ಮುಂಬೈ: ಇಂಗ್ಲೆಂಡ್ ಪ್ರವಾಸದ ವೇಳೆ ಕಾಲಿನ ಗಾಯಕ್ಕೊಳಗಾಗಿ ಇಡೀ ಸರಣಿಯಿಂದಲೇ ಹೊರಬಿದ್ದಿರುವ ಯುವ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಸಂಪೂರ್ಣವಾಗಿ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ನಡೆಯಲಿರುವ ದ್ವಿತೀಯಾರ್ಧದ ಐಪಿಎಲ್ಗೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡುವಾಗ ಶುಬ್ಮನ್ ಗಿಲ್ ಗಾಯಗೊಂಡಿದ್ದರು. ನಂತರ ಇಂಗ್ಲೆಂಡ್ನಿಂದ ತವರಿಗೆ ಮರಳಿದ್ದ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರಕ್ಕೆ ಸೇರ್ಪಡೆಯಾಗಿದ್ದರು.
ಗಿಲ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ ಮತ್ತು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಯುಎಇಗೆ ದ್ವಿತೀಯ ಭಾಗದ ಐಪಿಎಲ್ಗಾಗಿ ತೆರಳಲಿದ್ದಾರೆ. ಅವರು ಕಳೆದ ಒಂದು ವಾರದಿಂದ ಎನ್ಸಿಎನಲ್ಲಿದ್ದರು ಎಂದು ಮೂಲಗಳು IANS ಗೆ ಮಾಹಿತಿ ನೀಡಿವೆ.
ಶುಬ್ಮನ್ ಗಿಲ್ ಕಳೆದ 3 ಆವೃತ್ತಿಗಳಿಂದಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 48 ಪಂದ್ಯಗಳಿಂದ 7 ಅರ್ಧಶತಕಗಳ ನೆರವಿನಿಂದ 1071 ರನ್ಗಳಿಸಿದ್ದಾರೆ. ವಿದೇಶಿ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿರುವ ಆಟಗಾರರಿಗಿಂತ ಶುಬ್ಮನ್ ಗಿಲ್ ದೇಶಿ ಕ್ರಿಕೆಟಿಗರ ಜೊತೆ ಯುಎಇಗೆ ತೆರಳಿ ತರಬೇತಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಗಾಯದಿಂದ ಚೇತರಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಏಕಾಂಗಿಯಾಗಿ ಯುಎಇಗೆ ಪ್ರಯಾಣಸಿ, ಅಲ್ಲಿ ತರಬೇತಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಫಿಟ್ನೆಸ್ ಸಾಬೀತು ಪಡಿಸಿದ ಅಯ್ಯರ್.. ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್