ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಕನಸಿನ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ನೈಜ ಸವಾಲು ಎದುರಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕಾನ್ಪುರದಲ್ಲಿ ನಡೆದಿದ್ದ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ 105 ಮತ್ತು 65 ರನ್ಗಳಿಸಿದ್ದರು. ಈ ಪ್ರದರ್ಶನದ ಬೆನ್ನಲ್ಲೇ ಅಯ್ಯರ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಅವರ(ಅಯ್ಯರ್) ಮೊದಲ ಪಂದ್ಯದ ಪ್ರದರ್ಶನ ನನಗೆ ತುಂಬಾ ಖುಷಿ ತಂದಿದೆ.
ಆದರೆ, ಅವರ ನೈಜ ಪರೀಕ್ಷೆ ದಕ್ಷಿಣ ಆಫ್ರಿಕಾದಲ್ಲಿ ಬರಲಿದೆ. ಅವರು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ಗೆ ತೆರಳಿ ಅಲ್ಲಿ ಬೌನ್ಸ್ ಮತ್ತು ಪೇಸ್ಗೆ ಎದುರಿಸಿದಾಗ ಅಯ್ಯರ್ ಸಾಮರ್ಥ್ಯ ತಿಳಿಯಲಿದೆ. ಅಲ್ಲೂ ಉತ್ತಮವಾಗಿ ನಿಂತು ಆಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ದಾದಾ ತಿಳಿಸಿದ್ದಾರೆ.
ಅವಿಸ್ಮರಣೀಯ ಸಾಧನೆ
ಅವರು ತಮ್ಮ ವೃತ್ತಿ ಜೀವನವನ್ನು ಅದ್ಭುತವಾಗಿ ಆರಂಭಿಸಿದ್ದಾರೆ. ಡೆಬ್ಯೂಟ್ ಪಂದ್ಯದಲ್ಲಿ ಶತಕ ಬಾರಿಸುವುದು ಸ್ಮರಣೀಯ ಸಾಧನೆ. ಅವರು ಕೇವಲ ಆರಂಭದ ಆಟ ಎಂದು ನಾನು ಭಾವಿಸುತ್ತೇನೆ, ಈ ಆಟದ ನಂತರ ಅವರು ಇನ್ನೂ ಉತ್ತಮ ಆಟಗಾರನಾಗಿ ರೂಪುಗೊಳ್ಳುತ್ತಾರೆ. ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದು ಬಿಸಿಸಿಐ ಅಧ್ಯಕ್ಷ ಬ್ಯಾಕ್ಸ್ಟೇಜ್ ವಿತ್ ಬೋರಿಯಾ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 1996ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ಪದಾರ್ಪಣೆ ಮಾಡಿದ ಸೌರವ್ 131 ರನ್ಗಳಿಸಿದ್ದರು.
ಇದನ್ನೂ ಓದಿ:ಮಹತ್ವದ ಪ್ರವಾಸದ ಸಂದರ್ಭದಲ್ಲಿ ಕಿತ್ತಾಟ ಒಳ್ಳೆಯದಲ್ಲ, ಕ್ರಿಕೆಟ್ ಕಡೆಗೆ ಗಮನ ನೀಡಿ: ಕೊಹ್ಲಿಗೆ ಕಪಿಲ್ ಬುದ್ಧಿಮಾತು