ದುಬೈ: ಟಿ-20 ವಿಶ್ವಕಪ್‌ಗೆ ಕೇವಲ ಒಂದು ತಿಂಗಳಿಗೂ ಕಡಿಮೆ ಸಮಯವಿದೆ. ಆದರೆ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್ನಲ್ಲಿರುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಈ ಮೂವರು ಆಟಗಾರರು ಯುಎಇಯಲ್ಲಿ ಐಪಿಎಲ್ ಪುನಾರಾಂಭಗೊಂಡ ಮೇಲೆ ಅಂತ್ಯಂತ ಕಳಪೆ ಪ್ರದರ್ಶನ ತೋರಿ ವಿಕೆಟ್ ಒಪ್ಪಿಸಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ಇವರು ನೀಡಿದ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್‌ಗೆ ಆಯ್ಕೆ ಮಾಡಿದೆ. ಏಕೆಂದರೆ ಟಿ-20 ವಿಶ್ವಕಪ್ ನಡೆಯುವುದು ಯುಎಇಯಲ್ಲಿಯೇ.
ಆದರೆ ಕಳೆದ ಮೂರು ಪಂದ್ಯದಲ್ಲಿ ಇಶಾನ್ ಕಿಶನ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇಶಾನ್ ಕಿಶನ್ ಆಡಿದ 3 ಪಂದ್ಯಗಳಲ್ಲಿ 11, 14, 9 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕ್ರಮವಾಗಿ 3, 5 ಹಾಗೂ 8 ರನ್ ಗಳಿಸಿದ್ದಾರೆ. ಇದು ಬಿಸಿಸಿಐನ ಆಯ್ಕೆ ಸಮಿತಿಯ ಚಿಂತೆಗೆ ಕಾರಣವಾಗಿದೆ. ಇನ್ನು, ಲೆಗ್ ಸ್ಪಿನ್ನರ್ ರಾಹುಲ್ ಚಹರ್ 3 ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಫಿಟ್ನೆಸ್ ಬಗ್ಗೆಯೇ ಇನ್ನು ಸ್ಪಷ್ಟತೆ ಸಿಗುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಇಶಾನ್ ಕಿಶನ್‌ರನ್ನು ಕೈಬಿಟ್ಟು ಮೀಸಲು ಆಟಗಾರ ಶ್ರೇಯಸ್ ಅಯ್ಯರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟಿಸಿರುವ ವಿಶ್ವಕಪ್ ತಂಡದಲ್ಲಿ ಅಕ್ಟೋಬರ್ 10ಕ್ಕೂ ಮುನ್ನ ಬದಲಾವಣೆಗೆ ಅವಕಾಶ ಇದೆ.
ಇನ್ನು ಯಜುವೇಂದ್ರ ಚಾಹಲ್, ಶಿಖರ್ ಧವನ್ ಅವರನ್ನು ಕೂಡ ವಿಶ್ವಕಪ್ ತಂಡಕ್ಕೆ ಸೇರ್ಪಡೆ ಮಾಡಬೇಕೆಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈಗಾಗಲೇ ಆಯ್ಕೆ ಮಾಡಿರುವ ಆಟಗಾರರಲ್ಲಿ ಯಾರಿಗೆ ಕೊಕ್ ಕೊಟ್ಟು ಯಾರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IPL ಲೀಗ್ ಹಂತದ ಕೊನೆಯ ಎರಡು ಪಂದ್ಯ ಏಕಕಾಲದಲ್ಲಿ... ಬಿಸಿಸಿಐನಿಂದ ಮಹತ್ವದ ಮಾಹಿತಿ