ಡೆಹ್ರಾಡೂನ್: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರಿಷಭ್ ಪಂತ್ ಉತ್ತರಾಖಂಡದ ರೂರ್ಕಿಯಲ್ಲಿ ರಸ್ತೆ ಅಪಘಾತಕ್ಕೆ ಆಗಿದ್ದು, ಘಟನೆಯಲ್ಲಿ ಅವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತಕ್ಕೆ ನಿದ್ರೆ ಮತ್ತು ಅತಿವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ರಿಷಭ್ ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರಸ್ತೆ ಅಪಘಾತದ ನಂತರ ಶಿಖರ್ ಧವನ್ ಮತ್ತು ರಿಷಭ್ ಪಂತ್ ಸಂಭಾಷಣೆ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಶಿಖರ್ ಧವನ್ ಸಲಹೆಯನ್ನು ರಿಷಭ್ ಪಂತ್ ಪಾಲಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಬರೆದು ವಿಡಿಯೋ ಶೇರ್ ಆಗುತ್ತಿದೆ. ಅಲ್ಲದೇ, ಕಮೆಂಟ್ಗಳೂ ಸಹ ಇದೇ ರೀತಿಯಲ್ಲಿ ಬರುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಶಿಖರ್ ಧವನ್ ಮತ್ತು ರಿಷಭ್ ಪಂತ್ ಸಂಭಾಷಣೆಯ ವಿಡಿಯೋ ಮೂರು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ. ಆ ವಿಡಿಯೋದಲ್ಲಿ ಶಿಖರ್ ಧವನ್ ಬಳಿ ರಿಷಭ್ ಪಂತ್ ನನಗೆ ಒಂದು ಸಲಹೆ ನೀಡುವುದಾದರೆ, ಏನು ಸಲಹೆ ನೀಡುತ್ತೀರಿ ಎಂದು ಕೇಳುತ್ತಾರೆ. ವಿಶೇಷ ಎಂದರೆ ಪಂತ್ ಪ್ರಶ್ನೆಯನ್ನು ಕ್ರಿಕೆಟ್ ಸಂಬಂಧಿತವಾಗಿ ಕೇಳಿದ್ದರು, ಆದರೆ ಧವನ್ ಅದನ್ನು ವೈಯುಕ್ತಿಕ ವಿಚಾರವಾಗಿ ಸಲಹೆ ನೀಡಿದ್ದರು.
ನಿನಗೆ ನನ್ನ ಸಲಹೆ ಏನು ಎಂದರೆ ಕಾರನ್ನು ನಿಧಾನವಾಗಿ ಓಡಿಸು ಎಂದು ಹೇಳುತ್ತಾರೆ. ಆಗ ಪಂತ್ ನಗುತ್ತಾರೆ. ಆದರೆ, ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ರಸ್ತೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ.
ಕ್ರಿಕೆಟಿಗ ರಿಷಭ್ ಪಂತ್ ಅವರು ಡಿಸೆಂಬರ್ 30ರ ಮುಂಜಾನೆ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳಿದ್ದರು. ಈ ವೇಳೆ, ಅವರ ಕಾರು ರೂರ್ಕಿ ಬಳಿಯ ನರ್ಸನ್‌ನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು. ಅಪಘಾತ ಆದ ಕೆಲವೇ ಕ್ಷಣದಲ್ಲಿ ಕಾರಿಗೆ ಬೆಂಕಿ ತಗುಲಿದೆ. ಪಂತ್ ಅವರ ಸಮಯ ಪ್ರಜ್ಞೆ ಅವರನ್ನು ಬದುಕಿಸಿದೆ.
ಕಾರು ಅಪಘಾತವಾಗಿ ಬೆಂಕಿ ತಗುಲಿದ ಕೂಡಲೇ ಕಾರಿನ ಕಿಟಕಿಯ ಗಾಜು ಒಡೆದು ಹೊರ ಬಂದಿದ್ದಾರೆ. ಆ ತಕ್ಷಣ ಅಲ್ಲಿ ಸಂಚರಿಸುತ್ತಿದ್ದ ಬಸ್ ಡ್ರೈವರ್ ಒಬ್ಬರು ಪಂತ್ಗೆ ಸಹಕಾರ ನೀಡಿದ್ದಾರೆ. ಅವರನ್ನು ಸಮೀಪದ ಸಕ್ಷಮ ಆಸ್ಪತ್ರೆಗ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈಗ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲೇ ಪಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಪಂತ್ ವೇಗವಾಗಿ ಓಡಿಸುತ್ತಿದ್ದದ್ದನ್ನು ಕಾಣಬಹುದು ಮತ್ತು ಮುಂಜಾನೆಯಾದ್ದರಿಂದ ನಿದ್ರೆಯ ಮಂಪರಿನ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತದಲ್ಲಿ ಯಾವುದೇ ಮೂಳೆ ಮುರಿತ ಆಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದು, ಎರಡು ತಿಂಗಳ ಚಿಕಿತ್ಸೆಯ ಅಗತ್ಯ ಇದೆ ಎನ್ನಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಿಂದ ಪಂತ್ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ಕ್ರಿಕೆಟ್ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಕುಟುಂಬವು ಮೂಲತಃ ಪಿಥೋರಗಢ ಜಿಲ್ಲೆಯ ಗಂಗೊಳ್ಳಿಹತ್ ತಹಸಿಲ್‌ನವರು. ಪ್ರಸ್ತುತ, ರಿಷಭ್ ಪಂತ್ ಅವರ ಕುಟುಂಬವು ರೂರ್ಕಿಯ ಅಶೋಕ್ ನಗರ ಧಂಧೇರಾದಲ್ಲಿ ವಾಸಿಸುತ್ತಿದೆ.
ಇದನ್ನೂ ಓದಿ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್ ಪಂತ್ ರಕ್ಷಿಸಿದ ಚಾಲಕ ಸುಶೀಲ್: ಆಪತ್ಬಾಂಧವ ಹೇಳಿದ ಕರಾಳ ಕಥೆ