ಮುಂಬೈ: ಪ್ರಸ್ತುತ ಚಾಲ್ತಿಯಲ್ಲಿರುವ ರಣಜಿ ಟ್ರೋಫಿಯಲ್ಲಿ 2ನೇ ಗರಿಷ್ಠ ಸ್ಕೋರರ್ ಆಗಿರುವ ಮುಂಬೈ ತಂಡದ ಯುವ ಬ್ಯಾಟರ್ ಸರ್ಫರಾಜ್ ಖಾನ್ ತಮ್ಮ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ನಂಬಿಕೆಯಿಟ್ಟರೆ ನಾನು ಐಪಿಎಲ್‌ನಲ್ಲೂ ರನ್ಗಳಿಸಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2014 ಮತ್ತು 2016ರ ಅಂಡರ್ 19 ವಿಶ್ವಕಪ್ನಲ್ಲಿ ರಾರಾಜಿಸಿದ ಸರ್ಫರಾಜ್ ಖಾನ್ ಆರ್ಸಿಬಿ ಮೂಲಕ ಐಪಿಎಲ್ ಪಯಣ ಆರಂಭಿಸಿದರು. ಆದರೆ ಅವರಿಗೆ ಲೀಗ್ನಲ್ಲಿ ಯಶಸ್ಸು ಸಿಗಲಿಲ್ಲ. ಇದೀಗ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 20 ಲಕ್ಷ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಅವರು ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯಾರಾದರೂ ನನಗೆ ವಿಶ್ವಾಸವನ್ನು ನೀಡಿದರೆ ಮತ್ತು ನನ್ನಲ್ಲಿ ನಂಬಿಕೆಯನ್ನಿಟ್ಟರೆ ನಾನು ಐಪಿಎಲ್‌ನಲ್ಲೂ ಉತ್ತಮವಾಗಿ ಮಾಡಬಹುದು. ಮೊದಲು ನಾನು ರೆಡ್ ಬಾಲ್ ಕ್ರಿಕೆಟ್ನಲ್ಲಿ ಆಡುತ್ತೇನೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ನನಗೆ ಅವಕಾಶ ಸಿಕ್ಕರೆ ನಾನು ಉತ್ತಮ ಪ್ರದರ್ಶನ ನೀಡಬಲ್ಲೆ ಎಂದು ನನಗೆ ತಿಳಿದಿತ್ತು, ಏಕೆಂದರೆ ನಾನು ಪ್ರಥಮ ದರ್ಜೆ ಕ್ರಿಕೆಟ್ಗಾಗಿ ನಾಲ್ಕೈದು ವರ್ಷಗಳಿಂದ ಸಾಕಷ್ಟು ಶ್ರಮಿಸಿದ್ದೆ. ಅದೇ ರೀತಿ, ನನಗೆ ಐಪಿಎಲ್‌ನಲ್ಲೂ ರನ್ಗಳಿಸುವ ದಿನಗಳು ಬಂದೇ ಬರುತ್ತದೆ ಎಂದು ಸರ್ಫರಾಜ್ ಖಾನ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸರ್ಫರಾಜ್ ಖಾನ್ ಐಪಿಎಲ್ನಲ್ಲಿ 2015ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 2019ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಒಟ್ಟು 40 ಪಂದ್ಯಗಳನ್ನಾಡಿರುವ ಅವರು 28 ಇನ್ನಿಂಗ್ಸ್ಗಳಿಂದ ಏಕೈಕ ಅರ್ಧಶತಕ ಸೇರಿದಂತೆ 441 ರನ್ಗಳಿಸಿದ್ದಾರೆ.
2021-22ರ ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 4 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ 2 ಶತಕಗಳ ಸಹಿತ 551 ರನ್ಗಳಿಸಿದ್ದಾರೆ. ಒಟ್ಟಾರೆ ಕಳೆದ 12 ಇನ್ನಿಂಗ್ಸ್ಗಳಲ್ಲಿ ಅವರು 165,48, 63,275, 6,177,78, 25,226,301,36 ಮತ್ತು 71 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಆರ್ಸಿಬಿಗೆ ನೂತನ ಸಾರಥಿ.. ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ಘೋಷಿಸಿದ ರಾಯಲ್ ಚಾಲೆಂಜರ್ಸ್