ಜೋಹನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎಂಗಿಡಿ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದು, ಮುಂಬರುವ ನೆದರ್ಲೆಂಡ್ಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ಎಂಗಿಡಿಗೆ ಪಾಸಿಟಿವ್ ಬಂದಿರುವ ಸುದ್ದಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಹಿರಂಗ ಪಡಿಸಿದ್ದು, ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಗೆ ವೇಗಿ ಜೂನಿಯರ್ ದಾಲಾ ಅವರನ್ನು ಬದಲಿ ಆಟಗಾರನಾಗಿ ಘೋಷಿಸಿದೆ.
"ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದ ನಂತರ ಲುಂಗಿ ಎಂಗಿಡಿ ಅವರನ್ನ ಪ್ರವಾಸದಿಂದ ಹಿಂದೆ ಸರಿಯುವಂತೆ ಒತ್ತಾಯಿಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಮತ್ತು ಉತ್ಸಾಹದಲ್ಲಿದ್ದಾರೆ. CSAಯ ಕೋವಿಡ್ ಪ್ರೋಟೋಕಾಲ್‌ಗಳನ್ನು ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ಪಾಲಿಸುತ್ತಿದ್ದಾರೆ" ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರೊಟೀಸ್ ವೈದ್ಯಕೀಯ ತಂಡ ಅವರನ್ನು ಸಂಪರ್ಕದಲ್ಲಿದ್ದು, ಮಾಸಿಕ ಮತ್ತು ದೈಹಿಕ ಆರೋಗ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ. ಜೂನಿಯರ್ ದಾಲಾ ಅವರ ಬದಲಿ ಆಟಗಾರನಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
25ರ ಹರೆಯದ ಎಂಗಿಡಿ ಜುಲೈನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಸರಣಿಯ ನಂತರ ದಕ್ಷಿಣ ಆಫ್ರಿಕಾ ಪರ ಒಂದೂ ಪಂದ್ಯವನ್ನಾಡಿಲ್ಲ. ಅವರು ವೈಯಕ್ತಿಕ ಕಾರಣಗಳಿಂದಾಗಿ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ಪ್ರವಾಸವನ್ನು ತಪ್ಪಿಸಿಕೊಂಡರು. ಯುಎಇಯಲ್ಲಿ ನಡೆದ T20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದರಾದರೂ, ಅವರು ಒಂದೂ ಪಂದ್ಯವನ್ನಾಡಿರಲಿಲ್ಲ.
ಇದನ್ನೂ ಓದಿ:India vs NZ 1st Test : ಶ್ರೇಯಸ್ ಅಯ್ಯರ್ ಪದಾರ್ಪಣೆ ಖಚಿತಪಡಿಸಿದ ನಾಯಕ ರಹಾನೆ