ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಮರು ನಿಗದಿಪಡಿಸಲಾದ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆಡದಿರುವ ಬಗ್ಗೆ ಇನ್ನು ಖಚಿತ ನಿರ್ಧಾರ ತಳೆದಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟ ಪಡಿಸಿದ್ದಾರೆ. ಬುಧವಾರ ಸಂಜೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ದ್ರಾವಿಡ್, ಬಲಗೈ ಬ್ಯಾಟರ್ ರೋಹಿತ್ ಅವರನ್ನು ವೈದ್ಯರ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು.
ರೋಹಿತ್ ಅವರಿಗೆ ಶನಿವಾರ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲಾಗಿದ್ದು, ಅವರು ಕೋವಿಡ್-19 ಪಾಸಿಟಿವ್ ಆಗಿದ್ದಾರೆ. ರೋಹಿತ್ ವೈದ್ಯರ ನಿಗಾದಲ್ಲಿದ್ದು, ಅವರನ್ನು ಆಡಿಸುವ ಅಥವಾ ಬಿಡುವ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.
ಇನ್ನೂ 36 ಗಂಟೆಗಳು ಬಾಕಿ ಇದ್ದು, ಇಂದು ರಾತ್ರಿ ಮತ್ತು ನಾಳೆ ಬೆಳಗ್ಗೆ ಮತ್ತೊಮ್ಮೆ ಟೆಸ್ಟ್ ಮಾಡಲಾಗುವುದು. ಅವರು ಆಡಬೇಕಾದರೆ ಅವರ ರಿಪೋರ್ಟ್ ನೆಗೆಟಿವ್ ಆಗಬೇಕು. ಏನೇ ಆದರೂ ನಮ್ಮ ವೈದ್ಯಕೀಯ ತಂಡ ಮತ್ತು ಕ್ರೀಡಾ ವಿಜ್ಞಾನಿಗಳ ತಂಡಗಳು ಈ ಬಗ್ಗೆ ನಿರ್ಧರಿಸಲಿವೆ ಎಂದು ದ್ರಾವಿಡ್ ಹೇಳಿದರು.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೊರೊನಾ ಪಾಸಿಟಿವ್ ಆದ ನಂತರ ರೋಹಿತ್ ಹೊರಗುಳಿದಿದ್ದರು. ಬುಮ್ರಾ ನಾಯಕನಾದರೆ, ಕಪಿಲ್ ದೇವ್ ನಂತರ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವ ಮೊದಲ ವೇಗದ ಬೌಲರ್ ಅವರಾಗಲಿದ್ದಾರೆ.
ಬುಮ್ರಾ ನಾಯಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಅಧಿಕೃತ ಮೂಲಗಳಿಂದ ಮಾಹಿತಿ ಬರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ ಎಂದು ದ್ರಾವಿಡ್ ಬುಮ್ರಾ ಬಗ್ಗೆ ಸ್ಪಷ್ಟಪಡಿಸಿದರು.
ಇದನ್ನು ಓದಿ:ಬಲತೊಡೆ ಶಸ್ತ್ರಚಿಕಿತ್ಸೆ ಯಶಸ್ವಿ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೆ.ಎಲ್ ರಾಹುಲ್