ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಐಪಿಎಲ್ ಇತಿಹಾಸದ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರು ತಾವು ಲೀಗ್ ಆಡುತ್ತಿದ್ದ ದಿನಗಳಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡುತ್ತಿದ್ದರು ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಬಹಿರಂಗ ಪಡಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ಗೆ ಎರಡು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಕೊಂಡಾಡಿದರು. ಐಪಿಎಲ್ ಟೂರ್ನಿಯಲ್ಲಿ ನಾಯಕತ್ವದ ವಿಚಾರದಲ್ಲಿ ರೋಹಿತ್ ಶರ್ಮಾ ನನಗೆ ನಿದ್ರೆ ಕೆಡಿಸಿದ ಏಕೈಕ ಕ್ರಿಕೆಟಿಗ ಎಂದಿದ್ದಾರೆ.
"ನಾಯಕನಾಗಿ ನನಗೆ, ರೋಹಿತ್ ಶರ್ಮಾ ಮಾತ್ರ ನಿದ್ರೆ ಇಲ್ಲದ ರಾತ್ರಿಗಳನ್ನು ನೀಡಿದ ಏಕೈಕ ಕ್ರಿಕೆಟಿಗ. ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಆಗಲಿ ಅಥವಾ ಎಬಿ ಡಿವಿಲಿಯರ್ಸ್ ಆಗಲಿ ನನಗೆ ಹೆಚ್ಚೇನು ಕಾಡಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಯಕನಾಗಿ ರೋಹಿತ್ ಶರ್ಮಾಗಿಂತ ಯಶಸ್ವಿಯಾಗಿರುವ ಮತ್ತೊಬ್ಬ ಕ್ರಿಕೆಟಿಗರಿಲ್ಲ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತಮ್ ಗಂಭೀರ್ 2022ರ ಆವೃತ್ತಿಯಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಚೆಲ್ಸಿಯಾ ಕ್ಲಬ್ ಮಾಲೀಕ ರಷ್ಯಾದ ಬಿಲಿಯನೇರ್ ಆಸ್ತಿ ಬಳಕೆ, ಪ್ರಯಾಣಕ್ಕೆ ಯುಕೆ ನಿರ್ಬಂಧ