ನವದೆಹಲಿ: 15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೋಸ್ಕರ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ರೋಚಕ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಇದರ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ.
ಏಷ್ಯಾಕಪ್ನ ಮೋಸ್ಟ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ದಾಖಲು ಮಾಡಲಿದೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಪ್ರಶಸ್ತಿ ಎತ್ತಿ ಹಿಡಿಯುವ ಸಾಮರ್ಥ್ಯ ಟೀಂ ಇಂಡಿಯಾ ಬಳಿ ಇದೆ ಎಂದಿದ್ದಾರೆ.
ಏಷ್ಯಾಕಪ್ ಮಾತ್ರವಲ್ಲದೇ ಯಾವುದೇ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವುದು ಕಷ್ಟ. ಮುಂಬರುವ ಟಿ20 ವಿಶ್ವಕಪ್ನಲ್ಲೂ ಭಾರತ ಪ್ರಬಲ ಸ್ಪರ್ಧಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ವಿಭಾಗ ಇತರೆ ತಂಡಗಳಿಗಿಂತಲೂ ಉತ್ತಮವಾಗಿದ್ದು, ಏಷ್ಯಾಕಪ್ ಎತ್ತಿ ಹಿಡಿಯುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಕೈ ತಪ್ಪಿದ ಏಷ್ಯಾಕಪ್: ಡ್ಯಾಶಿಂಗ್ ಬ್ಯಾಟರ್ ಇಶಾನ್ ಕಿಶನ್ ಹೇಳಿದ್ದೇನು?
ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 7 ಹಾಗೂ ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆದ್ದಿದೆ. ಇಲ್ಲಿ ಭಾರತ ಹೆಚ್ಚಿನ ಲಾಭ ಪಡೆದುಕೊಂಡಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಟೀಂ ಇಂಡಿಯಾ ಆಡಿರುವ 21 ಟಿ20 ಪಂದ್ಯಗಳ ಪೈಕಿ 17ರಲ್ಲಿ ಗೆಲುವು ದಾಖಲು ಮಾಡಿದೆ. ಪ್ರಸಕ್ತ ವರ್ಷದ ಏಷ್ಯಾಕಪ್ ಯುಎಇನಲ್ಲಿ ನಡೆಯಲಿದ್ದು, ಭಾರತ, ಪಾಕಿಸ್ತಾನ,ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಆರು ತಂಡಗಳು ಮುಖಾಮುಖಿಯಾಗಲಿವೆ.