ಕಠ್ಮಂಡು(ನೇಪಾಳ): ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಐಪಿಎಲ್ ಆಟಗಾರ ಸಂದೀಪ್ ಲಮಿಚಾನೆ ಅವರು ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೋಷಿ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ಇಂದು ಆದೇಶ ಹೊರಡಿಸಿತು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಶಿಶಿರ್ ರಾಜ್ ಧಾಕಲ್ ಅವರಿದ್ದ ಪೀಠ, 2024ರ ಜನವರಿ 10ರಂದು ಶಿಕ್ಷೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್ವೊಂದರಲ್ಲಿ 17 ವರ್ಷದ ಬಾಲಕಿ ತನ್ನ ಮೇಲೆ ಸಂದೀಪ್ ಲಮಿಚಾನೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನೇಪಾಳ ಪೊಲೀಸರು ಆರೋಪಿ ಸಂದೀಪ್ ಲಮಿಚಾನೆ ಅವರನ್ನು ಬಂಧಿಸಿದ್ದರು. ಬಳಿಕ ಲಾಮಿಚಾನೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ಮೇರೆಗೆ ಪಟಾನ್ ಹೈಕೋರ್ಟ್ 2023ರ ಜನವರಿಯಲ್ಲಿ ಷರತ್ತುಬದ್ಧ ಜಾಮೀನು ನೀಡಿತ್ತು.
ಸಂದೀಪ್ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಪಾದಾರ್ಪಣೆ ಮಾಡಿದ್ದರು. ಲೆಗ್ ಸ್ಪಿನ್ನರ್ ಆಗಿರುವ ಕ್ರಿಕೆಟಿಗ 2016ರ ಅಂಡರ್ 19 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ, 2018ರ ಐಪಿಎಲ್ನಲ್ಲಿ ಅವರಿಗೆ ಸ್ಥಾನ ಸಿಕ್ಕಿತ್ತು. ಮೂಲ ಬೆಲೆ 20 ಲಕ್ಷ ರೂ. ನೀಡಿ ಡೆಲ್ಲಿ ಖರೀದಿಸಿತ್ತು.
ನೇಪಾಳ ತಂಡದ ಪರ 51 ಏಕದಿನ ಪಂದ್ಯ ಆಡಿದ್ದು, 112 ವಿಕೆಟ್ ಪಡೆದುಕೊಂಡಿದ್ದಾರೆ. 52 ಟಿ20 ಕ್ರಿಕೆಟ್ ಪಂದ್ಯಗಳಿಂದ 98 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ನಲ್ಲಿ 13 ವಿಕೆಟ್ ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್ಗಳಲ್ಲಿ ತಮ್ಮ ಲೆಗ್ ಸ್ಪಿನ್ ಸಾಮರ್ಥ್ಯ ತೋರಿಸಿದ್ದಾರೆ. ಬಿಗ್ಬ್ಯಾಷ್, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್‌ಗಳಲ್ಲೂ ಸಂದೀಪ್ ಆಡಿದ್ದಾರೆ.
ಕೊನೆಯದಾಗಿ ಈ ವರ್ಷದ ಸೆಪ್ಟೆಂಬರ್ 4ರಂದು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾ ಕಪ್ 2023 ಗುಂಪು ಹಂತದ ಪಂದ್ಯದಲ್ಲಿ ಲಮಿಚಾನೆ ಕೊನೆಯ ಏಕದಿನ ಪಂದ್ಯವನ್ನು ಭಾರತದ ವಿರುದ್ಧ ಆಡಿದ್ದರು.
ಇದನ್ನೂ ಓದಿ: '400 ರನ್ ನೀಡುವ ಪಿಚ್ ಆಗಿರಲಿಲ್ಲ': ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್