ನವದೆಹಲಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆ ಆ ಜಾಗಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ಇದೀಗ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಎಂಎಸ್ಕೆ ಪ್ರಸಾದ್ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಲಿ ಎಂದು ಸಲಹೆ ನೀಡಿದ್ದಾರೆ.
ಐಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಕೋಚ್ ಹುದ್ದೆಗೆ ದ್ರಾವಿಡ್ ಸೂಕ್ತ ವ್ಯಕ್ತಿ ಎನಿಸುತ್ತಾರೆ. ರವಿ ಭಾಯ್ ಬಳಿಕ ಆ ಜಾಗದಲ್ಲಿ ರಾಹುಲ್ ಹಾಗೂ ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸಿದ್ದೇನೆ. ರಾಹುಲ್ ದ್ರಾವಿಡ್ಗೆ ಆಟದ ವಿಚಾರದಲ್ಲಿ ಅನುಭವವಿದೆ. ಭಾರತ ತಂಡಕ್ಕೆ ಹೆಚ್ಚಿನ ಮೌಲ್ಯ ತಂದುಕೊಡಲಿದ್ದಾರೆ ಎಂದೆನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಕೋಚ್ ಆಗಿ, ಎಂಎಸ್ ಮಾರ್ಗದರ್ಶಕರಾಗಿ ಭಾರತೀಯ ಕ್ರಿಕೆಟ್ಗೆ ವರದಾನವಾಗುತ್ತಾರೆ. ಇಬ್ಬರೂ ಶಾಂತ ಮತ್ತು ಶ್ರಮಜೀವಿಗಳು. ಹೆಚ್ಚು ಮುಖ್ಯವಾಗಿ ಈ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಹೆಚ್ಚಾಗಿ ರಾಹುಲ್ ತಿದ್ದುತ್ತಾರೆ. ರಾಹುಲ್ ಕೋಚ್ ಹುದ್ದೆ ಅಲಂಕರಿಸದಿದ್ದರೆ ಬೇಸರಗೊಳ್ಳುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದಿದ್ದಾರೆ ಎಂಎಸ್ಕೆ ಪ್ರಸಾದ್.
ಇದನ್ನೂ ಓದಿ: ಟಿ-20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗುವುದು ಉತ್ತಮ: ಗವಾಸ್ಕರ್ ಅಭಿಪ್ರಾಯ