ದಿ ಓವೆಲ್(ಲಂಡನ್): ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಟಿ-20 ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಉಭಯ ತಂಡಗಳ ನಡುವೆ ನಾಳೆ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ಬಳಗ ಆತ್ಮವಿಶ್ವಾಸದಲ್ಲಿದೆ. ಲಂಡನ್ನ ದಿ ಓವೆಲ್ ಮೈದಾನದಲ್ಲಿ ಸಂಜೆ 5:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸುವ ತವಕದಲ್ಲಿವೆ. ಉಭಯ ತಂಡಗಳಲ್ಲೂ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚುವ ಆಟಗಾರರಿದ್ದಾರೆ.
ಯುವ ಹಾಗೂ ಅನುಭವಿ ಆಟಗಾರರಿಂದ ರೋಹಿತ್ ಬಳಗ ಕೂಡಿದ್ದು, ಟಿ-20 ವಿಶ್ವಕಪ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಡೆಯಲಿರುವ ಮತ್ತೊಂದು ಅಗ್ನಿಪರೀಕ್ಷೆ ಇದಾಗಿದೆ. ಹೀಗಾಗಿ, ಪ್ರತಿವೊಂದು ಪಂದ್ಯ ನಮಗೆ ಮಹತ್ವ ಪಡೆದುಕೊಂಡಿವೆ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.
ಇನ್ನೂ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಇಂದು ಮತ್ತೊಂದು ಅಗ್ನಿಪರೀಕ್ಷೆಯಾಗಿದೆ. ಕೇವಲ ಏಕದಿನ ಸರಣಿಯಲ್ಲಿ ಆಡುತ್ತಿರುವ ಶಿಖರ್ ಧವನ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆಯಾಗಿದೆ.
ಬಟ್ಲರ್ಗೆ ಮೊದಲ ಅಗ್ನಿಪರೀಕ್ಷೆ: ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ನಾಯಕತ್ವ ತೊರೆದ ಬಳಿಕ ಕ್ಯಾಪ್ಟನ್ ಆಗಿರುವ ಜಾಸ್ ಬಟ್ಲರ್ಗೆ ಇಂದು ಮೊದಲ ಏಕದಿನ ಸರಣಿಯಾಗಿದೆ. ಹೀಗಾಗಿ, ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಆಂಗ್ಲರ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋ ರೂಟ್, ಬೈರ್ಸ್ಟೋರಂತಹ ಬಲಿಷ್ಠ ಆಟಗಾರರಿದ್ದಾರೆ.
ಭಾರತ-ಇಂಗ್ಲೆಂಡ್ ಮುಖಾಮುಖಿ: ಉಭಯ ತಂಡಗಳು ಇಲ್ಲಿಯವರೆಗೆ ಒಟ್ಟು 103 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 55 ಪಂದ್ಯ ಹಾಗೂ ಇಂಗ್ಲೆಂಡ್ 43 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಉಳಿದಂತೆ ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಮ್ಯಾಚ್ಗಳಿಂದ ಫಲಿತಾಂಶ ಬಂದಿಲ್ಲ.
ತಂಡಗಳು ಇಂತಿವೆ: ಇಂಗ್ಲೆಂಡ್: ಜಾಸ್ ಬಟ್ಲರ್(ಕ್ಯಾಪ್ಟನ್), ಮೊಯಿನ್ ಅಲಿ, ಬೈರ್ಸ್ಟೋ, ಹ್ಯಾರಿ ಬ್ರೋಕ್, ಬ್ರಾಡನ್ ಕೆರ್ಸ್, ಸ್ಯಾಮ್ ಕರ್ರನ್, ಲಿವಿಗ್ಸ್ಟೋನ್, ಓವರ್ಟೊನ್, ಮ್ಯಾಥ್ಯೂ ಪ್ರಾಕ್ಸಿನ್, ಜೋ ರೂಟ್, ಜಾಸನ್ ರಾಯ್,ಪಿಲ್ ಸ್ಲಾಟ್,ಬೆನ್ ಸ್ಟೋಕ್ಸ್, ರೇಸ್ ಟೊಪ್ಲೆ, ಡೇವಿಡ್ ವಿಲ್ಲೆ
ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್