ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಗಡಿದಾಟಿದ ಮೊದಲ ಬ್ಯಾಟ್ಸ್ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಸ್ಫೋಟಕ ಬ್ಯಾಟಿಂಗ್ನಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಲು ನೆರವಾದ ಗೇಲ್, ತಮ್ಮಲ್ಲಿ ಇಂತಹ ಸಾಕಷ್ಟು ಆಟ ಉಳಿದಿದೆ ಮತ್ತು ಮುಂದೆ ಸಾಕಷ್ಟು ರನ್ ಹರಿದು ಬರಲಿದೆ ಎಂದು ತಿಳಿಸಿದ್ದಾರೆ.
ಕ್ರಿಸ್ ಗೇಲ್ ಇಂದು ನಡೆದ ಪಂದ್ಯದಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸಹಿತ ಕೇವಲ 38 ಎಸೆತಗಳಲ್ಲಿ 67 ರನ್ ಚಚ್ಚಿದರು. ಇವರ ಬ್ಯಾಟಿಂಗ್ ನೆರವಿನಿಂದ ಆಸೀಸ್ ನೀಡಿದ್ದ 142 ರನ್ಗಳ ಗುರಿಯನ್ನು ವಿಂಡೀಸ್ ಕೇವಲ 14.5 ಓವರ್ಗಳಲ್ಲಿ ತಲುಪುವ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳಿರುವಂತೆ ವಶಪಡಿಸಿಕೊಂಡಿತು. ಗೇಲ್ ದೇಶದ ಪರ 14ನೇ ಅರ್ಧಶತಕ ಬಾರಿಸಿದ್ದಲ್ಲದೆ, ಒಟ್ಟಾರೆ ಚುಟುಕು ಕ್ರಿಕೆಟ್ನಲ್ಲಿ 14 ಸಾವಿರ ಮೈಲುಗಲ್ಲು ಸ್ಥಾಪಿಸಿದರು.
"14,000 ರನ್ಗಳಿಸಿರುವುದು ಒಂದು ಶ್ರೇಷ್ಠ ಸಾಧನೆ. ಇದು ಅದ್ಭುತವಾಗಿದೆ. ನಾನು ಸ್ವತಃ 15 ಸಾವಿರ ರನ್ ಗಳಿಸುವ ಟಾರ್ಗೆಟ್ ನಿಗದಿಪಡಿಸಿಕೊಂಡಿದ್ದೇನೆ. ಮೊದಲಿಗನಾಗಿ 14 ಸಾವಿರ ರನ್ಗಳಿಸಿರುವುದಕ್ಕೆ ಸಂತೋಷವಿದೆ. ಅದರಲ್ಲೂ ಗೆಲುವಿನ ಪಂದ್ಯದಲ್ಲಿ ಬಂದಿದ್ದು ಉತ್ತಮವೆನಿಸಿದೆ. ಅರ್ಧಶತಕ ಗಳಿಸಿದ್ದು, ಮತ್ತು ಸರಣಿ ಗೆದ್ದಿರುವುದು ಅದ್ಭುತವಾಗಿದೆ" ಎಂದು ಗೇಲ್ ಹೇಳಿದ್ದಾರೆ.
"ನಾನು ಇನ್ನೂ ಕ್ರಿಕೆಟ್ನಲ್ಲಿ ಸಮರ್ಥನಾಗಿದ್ದೇನೆ ಎಂದು ಪ್ರದರ್ಶಿಸಲು ಇನ್ನೂ ಹೆಚ್ಚಿನ ರನ್ಗಳು ಬರಲಿವೆ. ನನ್ನ ಟ್ಯಾಂಕ್ನಲ್ಲಿ ಸಾಕಷ್ಟು(ಆಟ) ಉಳಿದಿದೆ. ಈ ಪಂದ್ಯದಲ್ಲಿ ಒಂದಷ್ಟು ರನ್ ಬಂದಿದ್ದು ನನಗೆ ರಿಲೀಫ್ ನೀಡಿದೆ. ಕೆಲವು ಸಮಯದಿಂದ ನಾನು ರನ್ಗಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನನಗೆ ಈ ದಿನದ ಆಟ ಸಂತೋಷ ತಂದಿದೆ, ಆದರೆ ಇದೆಲ್ಲಾ ನಮ್ಮ ತಂಡದ ಆಟಗಾರರ ಸಹಕಾರ ಮತ್ತು ನಾಯಕ ಪೊಲಾರ್ಡ್ ನನ್ನ ಹಿಂದೆ ನಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಕ್ರಿಸ್ ಗೇಲ್ ಅಬ್ಬರ, ಆಸ್ಟ್ರೇಲಿಯಾ ತತ್ತರ.. ಟಿ20 ಸರಣಿ ಕೈಚೆಲ್ಲಿದ ಫಿಂಚ್ ಬಳಗ!!