ಮುಂಬೈ: ಆಸ್ಟ್ರೇಲಿಯಾದ ನಾಯಕ, ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಆಗಿರುವ ಪ್ಯಾಟ್ ಕಮಿನ್ಸ್ 2022ನೇ ಐಪಿಎಲ್ನಲ್ಲಿ ತೀರಾ ವೈಫಲ್ಯ ಅನುಭವಿಸುತ್ತಿದ್ದಾರೆ. 15ನೇ ಆವೃತ್ತಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 11.5 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
15.5 ಕೋಟಿ ರೂ ನೀಡಿ 2020 ರಲ್ಲಿ ಪ್ಯಾಟ್ ಕಮಿನ್ಸ್ರನ್ನು ಖರೀದಿಸಿದ್ದ ಕೆಕೆಆರ್ 2022ರ ಐಪಿಎಲ್ ಹರಾಜಿಗೂ ಮುನ್ನ ಅವರನ್ನು ರಿಟೈನ್ ಮಾಡಿಕೊಂಡಿರಲಿಲ್ಲ. ಆದರೆ ಮತ್ತೆ ಮೆಗಾ ಹರಾಜಿನಲ್ಲಿ 7.25 ಕೋಟಿ ರೂ ನೀಡಿ ಖರೀದಿಸಿತು.
ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನವನ್ನು ಕಳೆದ ಎರಡು ವರ್ಷಗಳಿಂದ ಉಳಿಸಿಕೊಂಡು ಬರುತ್ತಿರುವ ಕಮಿನ್ಸ್ ಸೀಮಿತ ಓವರ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ನಲ್ಲಿ ಕೂಡ ಅವರು ದಯನೀಯ ವೈಫಲ್ಯ ಅನುಭವಿಸುತ್ತಿದ್ದು, ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 10ಕ್ಕಿಂತಲೂ ಹೆಚ್ಚಿನ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗುತ್ತಿದ್ದಾರೆ.
ಮೊದಲೆರಡು ಪಂದ್ಯಗಳನ್ನು ರಾಷ್ಟ್ರೀಯ ತಂಡದ ಜವಾಬ್ದಾರಿಯ ಕಾರಣ ತಪ್ಪಿಸಿಕೊಂಡಿದ್ದ ಅವರು ಕಳೆದ ನಾಲ್ಕು ಪಂದ್ಯಗಳಲ್ಲಿ ಕೆಕೆಆರ್ ಪ್ರತಿನಿಧಿಸಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ 49ಕ್ಕೆ2, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 51ಕ್ಕೆ0, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 40ಕ್ಕೆ 1 ಮತ್ತು ಇಂದಿನ ಪಂದ್ಯದಲ್ಲಿ 50ಕ್ಕೆ 1 ವಿಕೆಟ್ ಪಡೆದಿದ್ದಾರೆ.
ಒಟ್ಟಾರೆ ಲೀಗ್ನಲ್ಲಿ 4 ಪಂದ್ಯಗಳಿಂದ 15.5(95 ಎಸೆತ) ಓವರ್ ಎಸೆದಿರುವ ಅವರು 11.5 ರ ಎಕಾನಮಿಯಲ್ಲಿ 190 ರನ್ ಬಿಟ್ಟುಕೊಟ್ಟಿದ್ದಾರೆ. ಇದು ಪ್ರತಿ ಪಂದ್ಯದಲ್ಲು ಕೋಲ್ಕತ್ತಾ ತಂಡಕ್ಕೆ ಭಾರಿ ಹೊಡೆತ ನೀಡುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ಆಡಿಸಬೇಕೇ ಅಥವಾ ಬೇಡವೇ ಎಂಬ ಒತ್ತಡಕ್ಕೆ ಸಿಲುಕಿದೆ.
ಕಮಿನ್ಸ್ ಅನುಪಸ್ಥಿತಿಯಲ್ಲಿ 2 ಪಂದ್ಯಗಳಲ್ಲಿ ಆಡಿದ್ದ ನ್ಯೂಜಿಲ್ಯಾಂಡ್ನ ಟಿಮ್ ಸೌಥಿ ಆರ್ಸಿಬಿ ವಿರುದ್ಧ 20ಕ್ಕೆ 3 ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 36ಕ್ಕೆ 2 ವಿಕೆಟ್ ಪಡೆದಿದ್ದರು. ಕಮಿನ್ಸ್ಗೆ ಹೋಲಿಸಿದರೆ ಸೌಥಿ ಎಕಾನಮಿ ಮತ್ತು ವಿಕೆಟ್ ಎರಡರಲ್ಲೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದರು. ಪ್ಲೇ ಆಫ್ ಪ್ರವೇಶಿಸಲು ಪ್ರಬಲ ತಂಡಗಳಲ್ಲಿ ಒಂದಾಗಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಾದರೂ ಕಮಿನ್ಸ್ ಪ್ರದರ್ಶನವನ್ನು ಅವಲೋಕಿಸಿ ಅವಕಾಶ ನೀಡಬೇಕಿದೆ.
ಇದನ್ನೂ ಓದಿ:ಭಾರತದ ಈ ಬ್ಯಾಟರ್ ಐಪಿಎಲ್ನಲ್ಲಿ ನಾನೆದುರಿಸಿದ ಕಠಿಣ ಬ್ಯಾಟರ್ : ನರೈನ್