ನವದೆಹಲಿ : ಭಾರತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ 32 ವರ್ಷಗಳ ಹಿಂದೆ ಈ ದಿನ ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು.
ತೆಂಡೂಲ್ಕರ್ ತಮ್ಮ 16 ವರ್ಷ (213 ದಿನಗಳು) ವಯಸ್ಸಿನಲ್ಲಿ ಈ ದಾಖಲೆಗೆ ಪಾತ್ರರಾಗಿದ್ದರು. ಅವರು ಪಾಕಿಸ್ತಾನ ವಿರುದ್ಧ ಫೈಸಲಾಬಾದ್ನಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದರು.
ಭಾರತ 101 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಅವರು 59 ರನ್ಗಳಿಸಿದ್ದರು. ಸಂಜಯ್ ಮಂಜ್ರೇಕರ್(76) ಜೊತೆಗೂಡಿ 5ನೇ ವಿಕೆಟ್ಗೆ 143 ರನ್ಗಳ ಜೊತೆಯಾಟ ನಡೆಸಿ ಭಾರತ ಅಲ್ಪಮೊತ್ತಕ್ಕೆ ಕುಸಿಯದಂತೆ ಮಾಡಿದ್ದರು.
ಆ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 288 ರನ್ಗಳಿಸಿದರೆ, ಪಾಕಿಸ್ತಾನ 423 ರನ್ಗಳಿಸಿ 135 ರನ್ಗಳ ಮುನ್ನಡೆ ಪಡೆದಿತ್ತು. ಇನ್ನು 2ನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಅಜರುದ್ದೀನ್ ಅವರ ಶತಕದ ನೆರವಿನಿಂದ ಭಾರತ 4 ವಿಕೆಟ್ ಕಳೆದುಕೊಂಡು 398 ರನ್ಗಳಿಸಿ ಪಂದ್ಯವನ್ನು ಡ್ರಾಗೊಳಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವದಾಖಲೆ ಇನ್ನೂ ಸಚಿನ್ ಅವರ ಹೆಸರಿನಲ್ಲಿಯೇ ಉಳಿದಿದೆ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಅವರು ಮೂರು ಮಾದರಿಯ ಕ್ರಿಕೆಟ್ನಿಂದ 100 ಶತಕ,164 ಅರ್ಧಶತಕಗಳ ಸಹಿತ 34,357 ರನ್ಗಳಿಸಿದ್ದಾರೆ. 2019ರಲ್ಲಿ ಅವರು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ : KL Rahul : ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೆ.ಎಲ್.ರಾಹುಲ್ ಔಟ್