ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕಿವೀಸ್ನ ಬಹು ಆಯಾಮದ ಬೌಲಿಂಗ್ ದಾಳಿ ಸಮಸ್ಯೆಯೊಡ್ಡಬಲ್ಲದು ಎಂದಿರುವ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್, ಕೊಹ್ಲಿ 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಶತಕ ಸಿಡಿಸುವ ಅಭ್ಯಾಸಕ್ಕೆ ಮರಳಬೇಕಿದೆ ಎಂದು ಹೇಳಿದ್ದಾರೆ.
ಜೂನ್ 18ರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೌತಾಂಪ್ಟನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೆಣಸಾಡಲಿವೆ. ಈಗಾಗಲೇ ಭಾರತ ತಂಡ ಇಂಟ್ರಾಸ್ಕ್ವಾಡ್ ಅಭ್ಯಾಸ ಪಂದ್ಯವನ್ನಾಡುತ್ತಿದ್ದರೆ, ಮತ್ತೊಂದು ಕಡೆ ಕಿವೀಸ್ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಸಂಭ್ರಮದಲ್ಲಿದೆ.
ಬಹುಶಃ ಕೊಹ್ಲಿ ಕೆಲವು ಸಮಯವನ್ನು ಬ್ಯಾಟಿಂಗ್ ಸುಧಾರಣೆಗೆ ನೀಡಬೇಕೆಂದು ನಾನು ಭಾವಿಸುತ್ತೇನೆ ಮತ್ತು 2018ರಲ್ಲಿ ಅವರು ಸಾಕಷ್ಟು ಶತಕಗಳನ್ನು ಸಿಡಿಸಿದ್ದರು, ಇದೀಗ ಅದನ್ನು ಮರಳಿ ಪಡೆಯಬೇಕಿದೆ. ಅವರು ಆಗ 2014 ರ ವೈಫಲ್ಯ ಮೀರಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಈಗ ಅವರಿಗೆ ನ್ಯೂಜಿಲ್ಯಾಂಡ್ ತಂಡದ ಬಹು ಆಯಾಮದ ಬೌಲರ್ಗಳ ಸವಾಲನ್ನು ಎದುರಿಸಬೇಕಿದೆ. ಇದು ನಿಜಕ್ಕೂ ದೊಡ್ಡ ಸವಾಲು ಏಕೆಂದರೆ ಕಿವೀಸ್ ಬೌಲಿಂಗ್ ದಾಳಿ ಒಂದು ಅಯಾಮದ್ದಲ್ಲ ಎಂದು ಪಟೇಲ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ 2019ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ಅವರ 12 ವರ್ಷಗಳ ಜೀವನದಲ್ಲಿ 2020 ಮಾತ್ರ ಒಂದೂ ಶತಕವಿಲ್ಲದ ವರ್ಷವಾಗಿದೆ. ಇದೀಗ 2021ರಲ್ಲೂ ಅವರೂ ಒಂದೂ ಶತಕ ಸಿಡಿಸಿಲ್ಲ, ಹಾಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ.
ಕೊಹ್ಲಿ 2020ರಿಂದ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರೂ, ಒಂದು ಶತಕ ಸಿಡಿಸಿಲ್ಲ. 2019ರಲ್ಲಿ 7 ಶತಕ ಮತ್ತು 14 ಅರ್ಧಶತಕ , 2018ರಲ್ಲಿ 11 ಶತಕ ಮತ್ತು 9 ಅರ್ಧಶತಕ ಮತ್ತು 2017ರಲ್ಲಿ 11 ಶತಕ ಮತ್ತು 10 ಅರ್ಧಶತಕ ಸಿಡಿಸಿದ್ದರು.
ಇದನ್ನು ಓದಿ:WTC ಫೈನಲ್ ವಿನ್ನರ್ಗೆ___ಕೋಟಿ ರೂ, ಸೋತವರಿಗೂ ಸಿಗಲಿಗೆ 5.85 ಕೋಟಿ ರೂ