ಆಕ್ಲೆಂಡ್: ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬಿಜೆ ವಾಟ್ಲಿಂಗ್ ಇಂಗ್ಲೆಂಡ್ ಪ್ರವಾಸ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗುವುದಾಗಿ ಘೋಷಿಸಿಕೊಂಡಿದ್ದಾರೆ.
35 ವರ್ಷ ವಾಟ್ಲಿಂಗ್ ಜೂನ್ ತಿಂಗಳಲ್ಲಿ ಇಂಗ್ಲೆಂಡ್ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಂತರ ತಮ್ಮ 12 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆಯುವುದಾಗಿ ಮಂಗಳವಾರ ತಿಳಿಸಿದ್ದಾರೆ.
ವಾಟ್ಲಿಂಗ್ ನ್ಯೂಜಿಲ್ಯಾಂಡ್ ಟೆಸ್ಟ್ ತಂಡಕ್ಕೆ 2009ರಲ್ಲಿ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 73 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 8 ಶತಕಗಳ ಸಹಿತ 3773 ರನ್ ಸಿಡಿಸಿದ್ದಾರೆ. 28 ಏಕದಿನ ಪಂದ್ಯಗಳಿಂದ 573 ರನ್ಗಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳು ಮತ್ತು ಭಾರತದ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಅವರ ಪಾಲಿನ ಕೊನೆಯ ಪಂದ್ಯವಾಗಲಿದೆ.
" ನಿವೃತ್ತಿಗೆ ಇದು ಸೂಕ್ತ ಸಮಯ. ನ್ಯೂಜಿಲ್ಯಾಂಡ್ ತಂಡದ ಪರ, ಅದರಲ್ಲೂ ಟೆಸ್ಟ್ ಕ್ರಿಕೆಟ್ ಆಡಿರುವುದು ಬಹುದೊಡ್ಡ ಗೌರವ. ಟೆಸ್ಟ್ ಕ್ರಿಕೆಟ್ನ ಎಲ್ಲ ಮಾದರಿಗಿಂತಲೂ ಸರ್ವಶ್ರೇಷ್ಠ ಮಾದರಿಯಾಗಿದೆ. ಬಿಳಿಯ ಸಮವಸ್ತ್ರ ತೊಟ್ಟು ತಂಡದೊಂದಿಗೆ ಅಂಗಣದಲ್ಲಿ ಕಳೆದ ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ" ವಾಟ್ಲಿಂಗ್ ಹೇಳಿದ್ದಾರೆ.
ಇದನ್ನು ಓದಿ:ಕೊಹ್ಲಿಪಡೆ ಖಂಡಿತ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ