ವೆಲ್ಲಿಂಗ್ಟನ್: ಟಿ20 ಮಾದರಿಗೆ ಪ್ರತ್ಯೇಕ ನಾಯಕನ ಅಗತ್ಯದ ಬಗ್ಗೆ ಹೇಳಿದ್ದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸಲಹೆಯನ್ನು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅನುಮೋದಿಸಿದ್ದಾರೆ. ತಂಡದ ಬಲವರ್ಧನೆಗೆ ನಾಯಕನ ಬದಲು ಮಾಡಬಹುದು. ಹಾರ್ದಿಕ್ ಪಾಂಡ್ಯ ನಾಯಕನ ಸ್ಥಾನ ತುಂಬುವಲ್ಲಿ ಸಮರ್ಥ ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಟಿ20ಗೆ ಪ್ರತ್ಯೇಕ ನಾಯಕನ ನೇಮಕದಿಂದ ಯಾವುದೇ ಹಾನಿಯಾಗುವುದಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದಕ್ಕೆ ಸೂಕ್ತ ಆಟಗಾರ. ನಾಯಕನ ಬದಲಿ ತಂಡವನ್ನು ಬಲಪಡಿಸಲಿದೆ. ಮೂರು ಪ್ರಕಾರದ ಕ್ರಿಕೆಟ್ ಅನ್ನು ಒಬ್ಬ ನಾಯಕ ನಿಭಾಯಿಸುವುದು ಕಷ್ಟ. ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನದ ನೇತೃತ್ವ ವಹಿಸಿಕೊಂಡರೆ, ಟಿ20 ಮಾದರಿಗೆ ಹೊಸ ನಾಯಕನ ನೇಮಕ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.
ವಿವಿಎಸ್ ಲಕ್ಷ್ಮಣ್ ಅವರು ನೀಡಿದ ಸಲಹೆ ಉತ್ತಮವಾಗಿದೆ. ತಂಡಕ್ಕೆ ಟಿ20 ಸ್ಪೆಷಲಿಸ್ಟ್ ಆಟಗಾರರು ಬೇಕು. ಯುವಕರನ್ನು ಈಗಿನಿಂದಲೇ ಹುರಿಗೊಳಿಸಬೇಕಿದೆ. ಯುವಪಡೆಯನ್ನೇ ತಜ್ಞ ಆಟಗಾರರನ್ನಾಗಿ ಬೆಳೆಸಬೇಕಿದೆ. ತಂಡ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ನಲ್ಲಿ ಮಿಂಚಬೇಕು ಎಂದು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಹಿರಿಯ ಆಟಗಾರರ ವಿಶ್ರಾಂತಿಯಲ್ಲಿ ಸ್ಥಾನ ಪಡೆದಿರುವ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವಕಾಶವನ್ನು ಬಳಸಿಕೊಳ್ಳಬೇಕು. ತಮ್ಮ ಸಾಮರ್ಥ್ಯ ಸಾಬೀತು ಮಾಡಿ ತಂಡದಲ್ಲಿ ಭದ್ರ ಸ್ಥಾನ ಪಡೆಯಬೇಕು. ಮುಂದಿನ ಟಿ20 ವಿಶ್ವಕಪ್ಗೆ ತಂಡ ಯುವಕರಿಂದ ಕೂಡಿರಬೇಕು ಎಂದು ರವಿಶಾಸ್ತ್ರಿ ಹೇಳಿದರು.
ವಿದೇಶಿ ಲೀಗ್ಗಳ ಅಗತ್ಯವಿಲ್ಲ: ಬಿಗ್ ಬ್ಯಾಷ್, ಪಾಕಿಸ್ತಾನ ಪ್ರೀಮಿಯರ್ ಲೀಗ್, ಕೆರೆಬಿಯನ್ ಲೀಗ್ಗಳಲ್ಲಿ ಭಾರತೀಯರು ಭಾಗವಹಿಸಲು ಅನುಮತಿ ನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರವಿಶಾಸ್ತ್ರಿ, ಇದರ ಅಗತ್ಯವೇ ಇಲ್ಲ. ಆಟಗಾರರು ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನುಭವವೇ ಸಾಕು. ಸಾಗರೋತ್ತರ ಲೀಗ್ಗಳ ಅಗತ್ಯ ಭಾರತೀಯರಿಗಿಲ್ಲ ಎಂದು ಅಭಿಪ್ರಾಯಪಟ್ಟರು.
ಓದಿ: ಟಿ20ಗೆ ಬ್ಯಾಟ್ ಬಾಲ್ ಮಾಡುವ ಸ್ಪೆಷಲಿಸ್ಟ್ಗಳು ತಂಡಕ್ಕೆ ಅಗತ್ಯ: ವಿವಿಎಸ್ ಲಕ್ಷ್ಮಣ್