ವೆಲ್ಲಿಂಗ್ಟನ್: ಇತ್ತೀಚೆಗೆ ಭಾರತ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಪಡೆದು ಐತಿಹಾಸಿದ ದಾಖಲೆಗೆ ಪಾತ್ರರಾಗಿದ್ದ ನ್ಯೂಜಿಲ್ಯಾಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಿಂದ ಕೈಬಿಡುವ ಮೂಲಕ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಪಟೇಲ್ ಮುಂಬೈ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡದ ಎಲ್ಲ 10 ವಿಕೆಟ್ಗಳನ್ನು ಪಡೆದು ಅನಿಲ್ ಕುಂಬ್ಳೆ ಮತ್ತು ಜಿಮ್ ಲೇಕರ್ರೊಂದಿಗೆ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದರು. ಆದರೂ ಕಿವೀಸ್ ಮ್ಯಾನೇಜ್ಮೆಂಟ್ ತವರಿನ ಸರಣಿಯಲ್ಲಿ ಅವರನ್ನು ಕೈಬಿಡುವ ಗಟ್ಟಿನಿರ್ಧಾರ ತೆಗೆದುಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.
ಪಟೇಲ್ ಕೈಬಿಡಲು ಕಾರಣ?
ನ್ಯೂಜಿಲ್ಯಾಂಡ್ ತವರಿನ ಪರಿಸ್ಥಿತಿಯಲ್ಲಿ ವೇಗಿಗಳಿಗೆ ಹೆಚ್ಚು ಮಾನ್ಯತೆ ನೀಡಲಿದೆ. ಹಾಗಾಗಿ ಸ್ಪಿನ್ನರ್ಗಳ ಅವಶ್ಯಕತೆ ಅಗತ್ಯವಿಲ್ಲ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ದಾಖಲೆಯ ವೀರನನ್ನು ಹೊರಗಿಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಬ್ಯಾಟಿಂಗ್ ಆಲ್ರೌಂಡರ್ ರಚಿನ್ ರವೀಂದ್ರ ಅವರ ಮೇಲೆ ಹೆಚ್ಚಿನ ವಿಶ್ವಾಸವಿರಿಸಿ ಅವರು 13 ಸದಸ್ಯರ ತಂಡದಲ್ಲಿ ಅವಕಾಶ ನೀಡಿದೆ.
ಅಜಾಜ್ ಪಟೇಲ್ ತವರಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದುವರೆಗೆ ಒಂದೂ ವಿಕೆಟ್ ಪಡೆದಿಲ್ಲ. ಹಾಗಾಗಿ ಅವರನ್ನು ತವರಿನ ಸರಣಿಯಲ್ಲಿ ಕಡೆಗಣಿಸಿ ಯುವ ಆಟಗಾರನಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ಇದನ್ನೂ ಓದಿ:ಕನ್ನಡಿಗ ಮನೀಶ್ ಪಾಂಡೆ ಮೇಲೆ RCB ಕಣ್ಣು.. ಕೊಹ್ಲಿ ಬದಲಿಗೆ ನಾಯಕನಾಗುವ ಸಾಧ್ಯತೆ