ರಾಂಚಿ(ಜಾರ್ಖಂಡ್): ಕ್ರಿಕೆಟ್ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಫಾರ್ಮ್ಹೌಸ್ ಓಪನ್ ಮಾಡಿ, ವಿವಿಧ ತರಕಾರಿ, ಹಣ್ಣು ಸೇರಿದಂತೆ ಹೈನುಗಾರಿಕೆ ವ್ಯಾಪಾರ ಆರಂಭಿಸಿದ್ದಾರೆ. ಇದೀಗ, ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಮಾಹಿ, ಬೆಂಗಳೂರಿನಲ್ಲಿ ಜೂನ್ 1ರಿಂದ ಗ್ಲೋಬಲ್ ಸ್ಕೂಲ್ ಆರಂಭಿಸಲು ಮುಂದಾಗಿದ್ದಾರೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯುಸಿಯಾಗಿರುವ ಮಹೇಂದ್ರ ಸಿಂಗ್ ಧೋನಿ, ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೊಸದೊಂದು ಉದ್ಯಮ ಆರಂಭಿಸಲಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಜೂನ್ 1ರಿಂದ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಆರಂಭಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಕುಡ್ಲು ಗೇಟ್ ಬಳಿ ನಿರ್ಮಾಣ ಮಾಡಿರುವ ಶಾಲೆಯಲ್ಲಿ ಹೊಸ ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿ ಅಧ್ಯಯನದ ಜೊತೆಗೆ ಅನೇಕ ವಿಭಿನ್ನ ಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾಗಲು ಅವಕಾಶ ಮಾಡಿಕೊಡಲಾಗುತ್ತದೆ. ಎಂಎಸ್ ಗ್ಲೋಬಲ್ ಸ್ಕೂಲ್ ಈಗಾಗಲೇ ಮೈಕ್ರೋಸಾಫ್ಟ್ ಮತ್ತು ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ಸಂಸ್ಥೆ 'ಡ್ಯಾನ್ಸ್ ವಿತ್ ಮಾಧುರಿ' ಚಾನೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಶಾಲೆಯ ಮಾರ್ಗದರ್ಶಕರಾಗಿದ್ದು, ಆರ್ ಚಂದ್ರಶೇಖರ್ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಮದುವೆ ನಡೆಯುತ್ತಿದ್ದಾಗಲೇ ವರ ಮದ್ಯಪಾನ.. ಅದೇ ಮಂಟಪದಲ್ಲಿ ಬೇರೆಯವನೊಂದಿಗೆ ಸಪ್ತಪದಿ ತುಳಿದ ವಧು!
ಜೂನ್ 1ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ನರ್ಸರಿಯಿಂದ 7ನೇ ತರಗತಿವರೆಗೆ ಆಧುನಿಕ ವಿಧಾನದೊಂದಿಗೆ ಶಿಕ್ಷಣ ನೀಡಲಾಗುವುದು. ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಇಂಗ್ಲಿಷ್ ಮಾಧ್ಯಮವಾಗಿದ್ದು, ಸಿಬಿಎಸ್‌ಇ ಬೋರ್ಡ್ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಗ್ಲೋಬಲ್ ಸ್ಕೂಲ್ ಜೂನ್ 1 ರಿಂದ ಪ್ರಾರಂಭವಾಗಲಿದೆ. ಇದರ ಜೊತೆಗೆ ಎಂಎಸ್ ಧೋನಿ ಸ್ಪೋರ್ಟ್ಸ್ ಅಕಾಡೆಮಿ ಘಟಕ ಸಹ ಸ್ಥಾಪನೆ ಮಾಡಲಾಗಿದೆ.