ಲಾಹೋರ್(ಪಾಕಿಸ್ತಾನ): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಹಸ್ನೇನ್ ಅವರ ಬೌಲಿಂಗ್ ವಿಧಾನವನ್ನು ನಿಯಮಬಾಹಿರ ಎಂದಿದ್ದು, ಅಂತಾರಾಷ್ಟ್ರೀಯ ಮಟ್ಟ ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ಮೊಹಮ್ಮದ್ ಹಸ್ನೇನ್ಗೆ ನಿಷೇಧ ಹೇರಿದೆ.
ಲಾಹೋರ್ನಲ್ಲಿರುವ ಐಸಿಸಿಯಿಂದ ಮಾನ್ಯತೆ ಪಡೆದಿರುವ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರಿಶೀಲನೆಯಲ್ಲಿ ಮೊಹಮ್ಮದ್ ಹಸ್ನೇನ್ ಅವರ ಬೌಲಿಂಗ್ ವಿಧಾನ ನಿಯಮ ಬಾಹಿರ ಎಂದು ತಿಳಿದು ಬಂದಿದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಮೊಹಮ್ಮದ್ ಹಸ್ನೇನ್ ಬೌಲಿಂಗ್ ಕುರಿತ ವಿವರವಾದ ವರದಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ವೀಕರಿಸಿದ್ದು, ಅವರ ಬೌಲಿಂಗ್ 15 ಡಿಗ್ರಿಯ ಮಿತಿಯನ್ನು ದಾಟಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ನಾಳೆ ಆಂಗ್ಲರ ವಿರುದ್ಧ ಅಂಡರ್ 19 ವಿಶ್ವಕಪ್ ಫೈನಲ್: ಟೀಂ ಇಂಡಿಯಾ ಯುವ ಆಟಗಾರರನ್ನ ಹುರಿದುಂಬಿಸಿದ ವಿರಾಟ್
ಬೌಲಿಂಗ್ ತಜ್ಞರೊಂದಿಗೆ ಈ ಕುರಿತು ಚರ್ಚೆ ನಡೆಸಿರುವ ಪಿಸಿಬಿ ಈ ಸಮಸ್ಯೆ ಪರಿಹಾರವಾಗಬಹುದು ಎಂಬ ವಿಶ್ವಾಸದಲ್ಲಿದೆ. ಈಗ ಮೊಹಮ್ಮದ್ ಹಸ್ನೈನ್ಗೆ ಸಲಹೆಗಾರರನ್ನು ನೇಮಕ ಮಾಡಿದ್ದು, ಅವರು ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಳ್ಳಬಹುದು ಮತ್ತು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಸದ್ಯಕ್ಕೆ ಪಾಕಿಸ್ತಾನ ಸೂಪರ್ ಲೀಗ್ನಲ್ಲೂ ಮೊಹಮ್ಮದ್ ಹಸ್ನೈನ್ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ನಿರಾಕರಿಸಿದೆ.