ನವದೆಹಲಿ: ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರು ಮಹಿಳಾ ಕ್ರಿಕೆಟ್ನ 'ಸಚಿನ್ ತೆಂಡೂಲ್ಕರ್' ಎಂದು ಮಾಜಿ ನಾಯಕಿ ಶಾಂತ ರಂಗಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಥಾಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ದಾಖಲೆ ಪಾತ್ರರಾಗಿದ್ದಾರೆ. ಸಚಿನ್ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಸಿಡಿಸಿರುವ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಈಗಾಗಲೇ ಮಿಥಾಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಬ್ಯಾಟರ್ ಎಂಬ ದಾಖಲೆ ಹೊಂದಿದ್ದರು. ಇದೀಗ ಅವರ ದಾಖಲೆಯ ಪಟ್ಟಿಗೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
38 ವರ್ಷದ ಭಾರತದ ಬ್ಯಾಟರ್ ಮೂರು ಮಾದರಿಯ ಕ್ರಿಕೆಟ್ನಿಂದ 10,277 ರನ್ಗಳಿಸಿದ್ದಾರೆ. ಇಂಗ್ಲೆಂಡ್ ಚಾರ್ಲೋಟ್ ಎಡ್ವರ್ಡ್ಸ್ 309 ಪಂದ್ಯಗಳಿಂದ 10, 273 ರನ್ಗಳಿಸಿದ್ದರು. ಅವರು 78 ಅರ್ಧಶತಕ ಮತ್ತು 13 ಶತಕ ಸಿಡಿಸಿದ್ದಾರೆ. ಮಿಥಾಲಿ 317 ಪಂದ್ಯಗಳಿಂದ 10, 277 ರನ್ಗಳಿಸಿದ್ದಾರೆ. 78 ಅರ್ಧಶತಕ ಮತ್ತು 8 ಶತಕ ಸೇರಿವೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಮಿಥಾಲಿ ರಾಜ್
"ಮಿಥಾಲಿ ಸಾಧನೆಯನ್ನು ದಾಖಲೆಗಳೇ ಹೇಳುತ್ತಿವೆ. ಅವರು ಸಾಧಿಸಿರುವುದನ್ನು ಸುನೀಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಸಾಧನೆಗಳೊಂದಿಗೆ ಹೋಲಿಸಬಹುದು. ಮಿಥಾಲಿ ದಾಖಲೆಗಳು ದೀರ್ಘಕಾಲಿಕವಾಗಿರುತ್ತವೆ. ಶೀಘ್ರದಲ್ಲಿ ಅದನ್ನು ಯಾರಿಂದಲೂ ಮುರಿಯುವುದಕ್ಕೆ ಸಾಧ್ಯವಿಲ್ಲ" ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆಯಾಗಿರುವ ಶಾಂತ ತಿಳಿಸಿದ್ದಾರೆ.
ಮಿಥಾಲಿ ಅವರ ಸ್ಟ್ರೈಕ್ರೇಟ್ ಕುರಿತ ಟೀಕೆಗಳ ಬಗ್ಗೆ ಮಾತನಾಡಿದ ಶಾಂತ, ನೀವು ಒಂದು ಬ್ಯಾಟಿಂಗ್ ಗುಂಪಾಗಿ ಉತ್ತಮ ಪ್ರದರ್ಶನ ತೋರಿದ ಸಂದರ್ಭದಲ್ಲಿ ಮಾತ್ರ ಸ್ಟ್ರೈಕ್ ರೇಟ್ ಪರಿಗಣನೆಗೆ ಬರುತ್ತದೆ. ನಿನ್ನೆಯ ದಿನ ಅವರಿಗೆ ಯಾವುದೇ ಬ್ಯಾಟರ್ ಬೆಂಬಲ ನೀಡಲಿಲ್ಲ. ಅವರು ಅಲ್ಲಿರದಿದ್ದರೆ ಭಾರತ ತಂಡ 200 ರನ್ಗಳನ್ನು ಕೂಡ ತಲುಪುವುದಕ್ಕೆ ಕಷ್ಟವಾಗುತ್ತಿತ್ತು ಎಂದು ಭಾರತ ತಂಡದ ಮಾಜಿ ನಾಯಕಿ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಮಿಥಾಲಿ ಮಿಂಚಿನ ಆಟ: ಕೊನೆಯ ಪಂದ್ಯ ಗೆದ್ದು ಗೌರವ ಉಳಿಸಿಕೊಂಡ ಭಾರತ