ದುಬೈ: ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್( T20I World cup) ಎತ್ತಿ ಹಿಡಿಯುತ್ತಿದ್ದಂತೆ ಆಸ್ಟ್ರೇಲಿಯಾ(Australia) ತಂಡದ ವೇಗಿ ಜೋಶ್ ಹೇಜಲ್ವುಡ್( josh hazlewood) ಮತ್ತು ಆಲ್ರೌಂಡರ್ ಮಿಚೆಲ್ ಮಾರ್ಷ್(Mitchell Marsh) ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್ ನೀಡಿದ್ದ 173 ರನ್ಗಳ ಗುರಿಯನ್ನು ಇನ್ನು 7 ಎಸೆತಗಳಿರುವಂತೆ ಚೇಸ್ ಮಾಡಿ ಆಸ್ಟ್ರೇಲಿಯಾ ತಂಡ ತಲುಪಿ ಟಿ20 ವಿಶ್ವಕಪ್ ಜಯಿಸಿತು. ಈ ಮೂಲಕ ತನ್ನ ಖಾತೆಗೆ 6 ನೇ ವಿಶ್ವಕಪ್ ಸೇರಿಸಿಕೊಂಡಿತು.
ಇದೇ ಸಂದರ್ಭದಲ್ಲಿ ಹೇಜಲ್ವುಡ್ ಮತ್ತು ಮಿಚೆಲ್ ಮಾರ್ಷ್ ಕೂಡ ಐಸಿಸಿಯ ಅಂಡರ್ 19 ವಿಶ್ವಕಪ್(ICC U19 world cup), ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ಗಳನ್ನು ಗೆದ್ದ ಸಾಧನೆಗೆ ಪಾತ್ರರಾದರು. ಇವರಿಬ್ಬರು 2010ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ಆಸೀಸ್ ತಂಡದಲ್ಲಿದ್ದರು. ಈ ತಂಡವನ್ನು ಮಾರ್ಷ್ ಮುನ್ನಡೆಸಿದ್ದ ಮತ್ತೊಂದು ವಿಶೇಷ. ಇನ್ನು 2015ರಲ್ಲಿ ಮೈಕಲ್ ಕ್ಲಾರ್ಕ್ ನೇತೃತ್ವದಲ್ಲಿ ಗೆದ್ದ ಆಸೀಸ್ ತಂಡದಲ್ಲೂ ಈ ಇಬ್ಬರಿದ್ದರು. ಇದೀಗ ಆಸ್ಟ್ರೇಲಿಯಾ ಗೆದ್ದ ಚೊಚ್ಚಲ ಟಿ20 ವಿಶ್ವಕಪ್ ತಂಡ ಭಾಗವಾಗುವ ಮೂಲಕ ಭಾರತದ ಯುವರಾಜ್ ಸಿಂಗ್ ನಂತರ ಮೂರು ವಿಶ್ವಕಪ್ ಗೆದ್ದ ಆಟಗಾರರು ಎನಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಭಾರತದ ಸ್ಟಾರ್ ಆಲ್ರೌಂಡರ್ ಮಾತ್ರ ಐಸಿಸಿಯ ಮೂರು ವಿಶ್ವಕಪ್ ಪಂದ್ಯ ಗೆದ್ದ ಆಟಗಾರನಾಗಿದ್ದರು. ಅವರು 2000ದಲ್ಲಿ ಅಂಡರ್ 19, 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಭಾಗವಾಗಿದ್ದರು.
ಇದನ್ನೂ ಓದಿ:Zero to Hero: 'ಬಹುಪಾಲು ಆಸ್ಟ್ರೇಲಿಯಾ ಜನರು ನನ್ನನ್ನು ಧ್ವೇಷಿಸುತ್ತಾರೆ' ಎಂದಿದ್ದ ಮಾರ್ಷ್ ಇಂದು ಆ ದೇಶಕ್ಕೆ ಹೀರೋ