ನವದೆಹಲಿ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಇಂದು ನೇಮಿಸಲಾಗಿದೆ.
ಭಾರತ ಟೆಸ್ಟ್ ತಂಡದ ಸದಸ್ಯನೂ ಆಗಿರುವ ಮಯಾಂಕ್ (31) ಬೆಂಗಳೂರಿನವರು. ಕಳೆದ ಎರಡು ಬಾರಿ ಕೂಡ ಕನ್ನಡಿಗನಿಗೇ (ಕೆ ಎಲ್ ರಾಹುಲ್) ಪಂಜಾಬ್ ಮಣೆ ಹಾಕಿತ್ತು. ಆದರೆ, ಈ ಬಾರಿ ರಾಹುಲ್ ಲಖನೌ ಫ್ರಾಂಚೈಸಿಗೆ ನಾಯಕನಾಗಿ ಆಯ್ಕೆಯಾಗಿದ್ದು, ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಉಪ ನಾಯಕನಾಗಿದ್ದ ಮತ್ತೊಬ್ಬ ಕನ್ನಡಿಗ ಮಯಾಂಕ್ ಹೆಸರನ್ನು ಘೋಷಣೆ ಮಾಡಲಾಗಿದೆ.
"ನಾನು 2018ರಿಂದ ಪಂಜಾಬ್ ಕಿಂಗ್ಸ್‌ನಲ್ಲಿದ್ದೇನೆ ಮತ್ತು ಈ ಅದ್ಭುತ ಸ್ಥಾನವನ್ನು ಪ್ರತಿನಿಧಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ನಾನು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ತೆಗೆದುಕೊಳ್ಳುತ್ತೇನೆ.
ನಮ್ಮ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತುವ ಈ ಗುರಿಯತ್ತ ಕೆಲಸ ಮಾಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಪಂಜಾಬ್ ಫ್ರಾಂಚೈಸಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: 2022ರ ಐಪಿಎಲ್ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅತ್ಯಂತ ದುಬಾರಿ ಆಟಗಾರ!
2011ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅಗರ್ವಾಲ್, ಕಳೆದ ಎರಡು ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅವರು ಭಾರತಕ್ಕಾಗಿ 19 ಟೆಸ್ಟ್‌ಗಳು, 5 ಏಕದಿನ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳು ಸೇರಿದಂತೆ 1429 ರನ್‌ಗಳನ್ನು ಗಳಿಸಿದ್ದಾರೆ.