ಮೈಸೂರು: ಅಭಿನವ್ ಮನೋಹರ್ ಅವರ ಸ್ಫೋಟಕ ಅರ್ಧ ಶತಕ (55*)ದ ನೆರವಿನಿಂದ 193 ರನ್‌ಗಳ ಬೃಹತ್ ಮೊತ್ತದ ಗುರಿ ತಲುಪಿದ ಮಂಗಳೂರು ಯುನೈಟೆಡ್ ತಂಡ ಗುಲ್ಬರ್ಗ ಮೈಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಗಳಿಸಿದೆ.
193 ರನ್‌ಗಳ ಬೃಹತ್ ಮೊತ್ತ ಬೆಂಬತ್ತಿದ ಮಂಗಳೂರು ಯುನೈಟೆಡ್‌ಗೆ ಕೊನೆಯ ಮೂರು ಓವರ್‌ಗಳಲ್ಲಿ 31 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಅಭಿನವ್ ಮನೋಹರ್ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 55 ರನ್ ಸಿಡಿಸಿ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದಿತ್ತರು.
ಯುನೈಟೆಡ್ 19.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 195 ರನ್ ಗುರಿ ತಲುಪಿತು. ತಂಡದ ಪರ ಅನೀಶ್ವರ್ ಗೌತಮ್ (30), ನೊರೊನ್ಹಾ (24), ನಿಕಿನ್ ಜೋಸ್ (18), ಸುಜಯ್ (29), ಅಮಿತ್ ವರ್ಮಾ (15) ಹಾಗೂ ಶರತ್ (9*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಗುಲ್ಬರ್ಗ ಮೈಸ್ಟಿಕ್ಸ್ ಪರ ಶ್ರೀಶ ಆಚಾರ್ಯ 26 ರನ್‌ಗೆ 3 ವಿಕೆಟ್ ಗಳಿಸಿದ್ದು, ಆದರೆ ಅಭಿಲಾಶ್ ಶೆಟ್ಟಿ ಹಾಗೂ ಕಾವೇರಪ್ಪ ಅವರ ಬೌಲಿಂಗ್ ತಂಡಕ್ಕೆ ದುಬಾರಿ ಎನಿಸಿತು.
ಮಂಗಳೂರಿಗೆ ಕಠಿಣ ಸವಾಲು : ನಾಯಕ ಮನೀಶ್ ಪಾಂಡೆ (86*) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಮಂಗಳೂರು ಯುನೈಟೆಡ್‌ಗೆ 193 ರನ್‌ಗಳ ಕಠಿಣ ಸವಾಲು ನೀಡಿತ್ತು. ಟಾಸ್ ಗೆದ್ದ ಮಂಗಳೂರು ಯುನೈಟೆಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆರಂಭದಲ್ಲಿ ಯಶಸ್ಸು ಕಂಡ ಯುನೈಟೆಡ್ ಬೌಲರ್‌ಗಳು ನಂತರ ದುಬಾರಿ ಎನಿಸಿದರು. ಗುಲ್ಬರ್ಗ ಮೈಸ್ಟಿಕ್ಸ್ ಮೊದಲ ಬಾರಿಗೆ 6 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.
ಪ್ರತಿ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ರೋಹನ್ ಪಾಟೀಲ್ ಈ ಪಂದ್ಯದಲ್ಲಿ ಕೇವಲ 10 ರನ್‌ಗೆ ತೃಪ್ತಿಪಟ್ಟರು. 10 ರನ್ ಗಳಿಸಿ ಆಡುತ್ತಿದ್ದ ರೋಹನ್ ವೈಶಾಖ್ ಬೌಲಿಂಗ್‌ನಲ್ಲಿ ಅಮಿತ್ ವರ್ಮಾಗೆ ಕ್ಯಾಚಿತ್ತು ಪೆವಿಲಿಯನ್ಗೆ ನಿರ್ಗಮಿಸಿದರು. ಇನ್ನೋರ್ವ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಒಂದು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ ಅಬ್ಬರದ ಆಟಕ್ಕೆ ಮನ ಮಾಡಿದರೂ ಮುಂದುವರಿಕೆಗೆ ಶರತ್ ಅವಕಾಶ ನೀಡಲಿಲ್ಲ.
ಕೇವಲ 16 ರನ್ ಗಳಿಸುತ್ತಲೇ ಪಡಿಕ್ಕಲ್ ಪೆವಿಲಿಯನ್ ಹಾದಿ ಹಿಡಿದರು. ಜಸ್ವತ್ ಆಚಾರ್ಯ ಕೇವಲ 6 ರನ್ ಗಳಿಸುವಲ್ಲೇ ಶರತ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಒಂದು ಹಂತದಲ್ಲಿ ಮೈಸ್ಟಿಕ್ಸ್ ಪಡೆಯಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ ಜೊತೆಯಾದ ನಾಯಕ ಮನೀಶ್ ಪಾಂಡೆ ಹಾಗೂ ಶ್ರೀಜಿತ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 86 ರನ್ ಗಳಿಸುವ ಮೂಲಕ ತಂಡ ಚೇತರಿಕೆ ನೀಡಿದರು. ಶ್ರೀಜಿತ್ 2 ಸಿಕ್ಸರ್ ನೆರವಿನಿಂದ 29 ಎಸೆತಗಳಲ್ಲಿ 36 ರನ್ ಗಳಿಸಿ ನಾಯಕ ಪಾಂಡೆಗೆ ಸಾಥ್ ನೀಡಿದರು. ಕನೋಜ್ ಭಾಂಡಗೆ ಕೇವಲ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.
ಮನೀಶ್ ಪಾಂಡೆಯಿಂದ ನಾಯಕನ ಆಟ : ಮನೀಶ್ ಪಾಂಡೆಗೆ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ತಮ್ಮ ನೈಜ ಸಾಮರ್ಥ್ಯ ತೋರಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಪಂದ್ಯದಲ್ಲಿ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿ ಅಜೇಯ 86 ರನ್ ಗಳಿಸಿ ಮೊದಲ ಬಾರಿಗೆ 190ರ ಗಡಿ ದಾಟುವಂತೆ ಮಾಡಿದರು. ಗುಲ್ಬರ್ಗ ಮೈಸ್ಟಿಕ್ಸ್ ಕೊನೆಯ 5 ಓವರ್‌ಗಳಲ್ಲಿ 82 ರನ್ ಸಿಡಿಸಿದ್ದು ಮಂಗಳೂರು ಬೌಲರ್‌ಗಳು ಒತ್ತಡಕ್ಕೆ ಸಿಲುಕಿದ್ದನ್ನು ಸ್ಪಷ್ಟಪಡಿಸುತ್ತದೆ. ಯುನೈಟೆಡ್ ಪರ ಶರತ್ 44ಕ್ಕೆ 2 ಹಾಗೂ ವೈಶಾಖ್ ವಿಜಯ್ ಕುಮಾರ್ 28ಕ್ಕೆ 3 ವಿಕೆಟ್‌ಗಳನ್ನು ಪಡೆದುಕೊಂಡರು.
ಸಂಕ್ಷಿಪ್ತ ಸ್ಕೋರ್ : ಗುಲ್ಬರ್ಗ ಮೈಸ್ಟಿಕ್ಸ್: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 192 (ಮನೀಶ್ ಪಾಂಡೆ 86*, ಶ್ರೀಜಿತ್ 36, ಮನೋಜ್ 29, ಶರತ್ 44ಕ್ಕೆ 2, ವೈಶಾಖ್ 28ಕ್ಕೆ 3)
ಮಂಗಳೂರು ಯುನೈಟೆಡ್: 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 195 (ಅಭಿನವ್ ಮನೋಹರ್ 55*, ಅನೀಶ್ವರ್ ಗೌತಮ್ 30, ಶ್ರೀಶ ಆಚಾರ್ಯ 26ಕ್ಕೆ 3)
ಇದನ್ನೂ ಓದಿ : ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್ ಮಣಿಸಿದ ಶಿವಮೊಗ್ಗ ಸ್ಟ್ರೈಕರ್ಸ್