ಮ್ಯಾಂಚೆಸ್ಟರ್(ಲಂಡನ್): ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಆರಂಭಗೊಳ್ಳಬೇಕಾಗಿದ್ದು, ಇದರ ಮುನ್ನಾದಿನವಾದ ಇಂದು ಟೀಂ ಇಂಡಿಯಾದ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಎಲ್ಲ ಪ್ಲೇಯರ್ಸ್ ಅಭ್ಯಾಸದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಸಹಾಯಕ ಸಿಬ್ಬಂದಿವೋರ್ವನಿಗೆ ಕೊರೊನಾ ಸೋಂಕು ದೃಢಗೊಂಡಿರುವ ವರದಿ ಬಂದಿದೆ. ಹೀಗಾಗಿ ಎಲ್ಲ ಪ್ಲೇಯರ್ಸ್ಗೂ ಹೋಟೆಲ್ನಲ್ಲಿರುವಂತೆ ಸೂಚನೆ ನೀಡಲಾಗಿದೆ.
ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದೆ. ಇದೀಗ ಎಲ್ಲ ಆಟಗಾರರು ಮತ್ತೊಮ್ಮೆ ಕೊರೊನಾ ಪರೀಕ್ಷೆಗೊಳಪಡುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೊನಾ ಇರುವುದು ದೃಢಗೊಂಡಿದ್ದು, 10 ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಆಡಳಿತ ಮಂಡಳಿ ಹಾಗೂ ಟೀಂ ಇಂಡಿಯಾದ ತಲೆನೋವು ಹೆಚ್ಚಿಸಿದೆ.
ಇದನ್ನೂ ಓದಿ: RT-PCR ಟೆಸ್ಟ್ನಲ್ಲಿ ಶಾಸ್ತ್ರಿಗೆ ಕೋವಿಡ್ ದೃಢ, 10 ದಿನ ಐಸೋಲೇಷನ್ : ಫೈನಲ್ ಟೆಸ್ಟ್ನಿಂದ ಔಟ್
ನಾಳೆಯಿಂದಲೇ ಮ್ಯಾಂಚೆಸ್ಟರ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಆರಂಭಗೊಳ್ಳಬೇಕಾಗಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆ ಸಾಧಿಸಿದೆ.
ತಂಡದ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಈಗಾಗಲೇ ಸೋಂಕಿಗೊಳಗಾಗಿರುವ ಕಾರಣ ಕೊಹ್ಲಿ ಪಡೆ ಫೈನಲ್ ಪಂದ್ಯಕ್ಕಾಗಿ ಯಾವುದೇ ತರಬೇತುದಾರರು ಇಲ್ಲದೇ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ.