ರಾಂಚಿ(ಜಾರ್ಖಂಡ್): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಲೈವ್ ಮೂಲಕ ಮಹತ್ವದ ವಿಷಯಗಳನ್ನು ಹಂಚಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಶನಿವಾರ ಧೋನಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.
2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿರುವ ಧೋನಿ ಇದೀಗ ಐಪಿಎಲ್ನಿಂದಲೂ ನಿವೃತ್ತಿ ಘೋಷಣೆ ಮಾಡುತ್ತಾರಾ? ಎಂಬ ಪ್ರಶ್ನೆಯೂ ಸಹ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. 'ನಾನು ಸೆಪ್ಟೆಂಬರ್ 25ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನೂ ಲೈವ್ನಲ್ಲಿ ಭೇಟಿಯಾಗಲು ಆಶಿಸುತ್ತೇನೆ!' ಎಂದು ಎಂಎಸ್ಡಿ ಪೋಸ್ಟ್ ಮಾಡಿದ್ದಾರೆ.
ಎಂಎಸ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲೊಬ್ಬರು. ನಾಯಕತ್ವದಲ್ಲಿ ಅದ್ಭುತ ಚಿಂತನೆ, ವಿಶಿಷ್ಟ ಕೌಶಲ್ಯ ಹಾಗೂ ಹೆಲಿಕಾಪ್ಟರ್ ಶಾಟ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2007ರಲ್ಲಿ ಐಸಿಸಿ ವಿಶ್ವ ಟ್ವೆಂಟಿ 20, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ನಾಯಕನಾಗಿರುವ ಧೋನಿ ಇಂದು ಏನೆಲ್ಲಾ ಘೋಷಣೆ ಮಾಡಬಹುದು ಎಂಬ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಮಣಿಸಿದ ಭಾರತದ ವನಿತೆಯರು: ಜೂಲನ್ ಗೋಸ್ವಾಮಿಗೆ ವೈಟ್ವಾಶ್ ಉಡುಗೊರೆ