ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ಆರಂಭಗೊಳ್ಳಲು ಕೇವಲ ನಾಲ್ಕು ದಿನ ಬಾಕಿ ಉಳಿದಿದೆ. ಈಗಾಗಲೇ ಬಹುತೇಕ ತಂಡಗಳು ಪಂದ್ಯಗಳಿಗಾಗಿ ಕಠಿಣ ಅಭ್ಯಾಸ ಆರಂಭಿಸಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ಸೂಪರ್ ಜೈಂಟ್ಸ್ ಕೂಡ ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಕಸರತ್ತು ಶುರು ಮಾಡಿದೆ.
ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿದ್ದ ರಾಹುಲ್, ಈ ಸಲ ದಿಢೀರ್ ಆಗಿ ಫ್ರಾಂಚೈಸಿಯಿಂದ ಹೊರಬಂದಿದ್ದರು. ಜೊತೆಗೆ, ಲಖನೌ ತಂಡ ಸೇರಿಕೊಂಡಿದ್ದರು. ಯಾವ ಕಾರಣಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಖುದ್ದಾಗಿ ರಾಹುಲ್ ಮಾತನಾಡಿದ್ದಾರೆ.

ಪಂಜಾಬ್ ತಂಡದಲ್ಲಿ ನಾಯಕತ್ವದ ಜೊತೆಗೆ ಉತ್ತಮ ರನ್ಗಳಿಕೆ ಮಾಡುತ್ತಿದ್ದ ಕೆ.ಎಲ್.ರಾಹುಲ್ ತಂಡವನ್ನು ಪ್ಲೇ ಆಫ್ಗೆ ಕರೆದೊಯ್ಯಲು ವಿಫಲರಾಗಿದ್ದರು. ಇದರ ಹೊರತಾಗಿಯೂ ಕೂಡ ಫ್ರಾಂಚೈಸಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿತ್ತು. ಇದಕ್ಕೆ ನಿರಾಕರಿಸಿದ್ದ ರಾಹುಲ್, ಹೊಸ ತಂಡದಲ್ಲಿ ಮತ್ತಷ್ಟು ಅವಕಾಶ ಎದುರು ನೋಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಪಂಜಾಬ್ ತಂಡ ತೊರೆಯುವ ನಿರ್ಧಾರ ತುಂಬಾ ಕಠಿಣವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಆ ತಂಡದ ಭಾಗವಾಗಿದ್ದೆ. ಆದರೆ, ನನಗಾಗಿ ಬೇರೆ ಇನ್ನೇನೋ ಕಾದಿದೆ. ಹೊಸ ಅವಕಾಶ ಪಡೆದುಕೊಂಡು ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮತ್ತಷ್ಟು ಏನಾದ್ರು ಮಾಡಬಹುದು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು. ಇದೇ ಕಾರಣಕ್ಕಾಗಿ ಪಂಜಾಬ್ ತಂಡದಿಂದ ಹೊರಬಂದೆ ಎಂದರು.

ಪಂಜಾಬ್ ತಂಡದಲ್ಲಿ ಈಗಾಗಲೇ ನಾಯಕತ್ವ ಜವಾಬ್ದಾರಿ ನಿರ್ವಹಿಸಿರುವ ಕೆ.ಎಲ್.ರಾಹುಲ್ ಇದೀಗ ಲಖನೌ ತಂಡದ ಕ್ಯಾಪ್ಟನ್ ಆಗಲಿದ್ದು, ಉತ್ತಮ ಪ್ರದರ್ಶನ ನೀಡುವ ಇರಾದೆ ಹೊರಹಾಕಿದ್ದಾರೆ. ಪಂಜಾಬ್ ತಂಡಕ್ಕೆ ರಾಹುಲ್ ಗುಡ್ಬೈ ಹೇಳುತ್ತಿದ್ದಂತೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರವಾಲ್ ತಂಡದ ನಾಯಕನಾಗಿದ್ದಾರೆ.
ಲಖನೌ ತಂಡ: ಕೆ.ಎಲ್.ರಾಹುಲ್(ಕ್ಯಾಪ್ಟನ್), ರವಿ ಬಿಶ್ನೋಯ್, ಸ್ಟೋಯ್ನಿಸ್, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ, ಆವೇಶ್ ಖಾನ್, ಅಂಕಿತ್ ಸಿಂಗ್ ರಜಪೂತ್, ಕೆ.ಗೌತಮ್, ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹಿಸ್ನ್ ಖಾನ್, ಬದೊನಿ, ಮೆಯರ್ಸ್, ಕರಣ್ ಶರ್ಮಾ, ಲಿವಿಸ್ ಹಾಗು ಮಯಾಂಕ್ ಯಾದವ್