ದುಬೈ: ಮುಂಬರುವ ಟಿ-20 ವಿಶ್ವಕಪ್ಗಾಗಿ ಭಾರತ ತಂಡದ ಮೆಂಟರ್ ಆಗಿ ತಂಡ ಸೇರಿರುವ ಮಾಜಿ ನಾಯಕ ಎಂಎಸ್ ಧೋನಿ ಅವರು ಮುಂದಿನ ಒಂದೆರಡು ವಾರಗಳಲ್ಲಿ ನೀಡುವ ಪ್ರತಿಯೊಂದು ಸಲಹೆಯನ್ನು ಬಳಸಿಕೊಳ್ಳುತ್ತೇವೆ ಎಂದು ಕನ್ನಡಿಗ ಹಾಗೂ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ತಿಳಿಸಿದ್ದಾರೆ. ಅಲ್ಲದೇ ಧೋನಿ ಡ್ರೆಸ್ಸಿಂಗ್ ರೂಮ್ನಲ್ಲಿ ಶಾಂತಿ ನೆಲೆಸುವಂತೆ ಮಾಡಲಿದ್ದಾರೆ ಎಂದು ಕರ್ನಾಟಕ ಬ್ಯಾಟರ್ ಹೇಳಿದ್ದಾರೆ.
ಅಕ್ಟೋಬರ್ 24ರಂದು ಪಾಕಿಸ್ತಾನದ ವಿರುದ್ಧ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿರುವ ರಾಹುಲ್, ವಿಶ್ವಕಪ್ನಂತಹ ಕಠಿಣ ಪ್ರಯಾಣದಲ್ಲಿ ಎಂಎಸ್ ಧೋನಿಗಿಂತ ಉತ್ತಮ ಮಾರ್ಗದರ್ಶಕ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ನಿಸ್ಸಂಶಯವಾಗಿ, ಎಂಎಸ್ ಧೋನಿ ತಂಡಕ್ಕೆ ಮರಳಿರುವುದು ನಮ್ಮಲ್ಲಿ ಅದ್ಭುತ ಭಾವನೆ ಉಂಟು ಮಾಡಿದೆ. ಏಕೆಂದರೆ ಅವರ ನಾಯಕತ್ವದಲ್ಲಿ ನಾವೆಲ್ಲ ಆಡಿದ್ದೇವೆ. ಅಲ್ಲದೇ ಅವರು ನಾಯಕರಾಗಿದ್ದಾಗಲೂ ಅವರನ್ನು ನಾವೆಲ್ಲ ಮಾರ್ಗದರ್ಶಕರಾಗಿಯೇ ನೋಡಿದ್ದೇವೆ ಎಂದು ರೆಡ್ಬುಲ್ ಆಯೋಜಿಸಿದ್ದ ಕ್ಲಬ್ಹೌಸ್ ಸಂವಾದದ ವೇಳೆ ತಿಳಿಸಿದ್ದಾರೆ.
ಅವರು ನಾಯಕನಾಗಿದ್ದಾಗ ಡ್ರೆಸ್ಸಿಂಗ್ ರೂಮ್ನಲ್ಲಿರುವುದನ್ನು ನಾವು ಇಷ್ಟಪಡುತ್ತಿದ್ದೆವು. ಅವರ ಶಾಂತತೆಯನ್ನು ನಾವು ಇಷ್ಟಪಡುತ್ತೇವೆ. ನಾವೆಲ್ಲರೂ ಅವರಿಂದ ಸಹಾಯ ಪಡೆಯಲು ಎದುರು ನೋಡುತ್ತಿದ್ದೇವೆ, ಅವರನ್ನು ಹೊಂದಿರುವುದು ನಿಜಕ್ಕೂ ಅದ್ಭುತ. ಅವರಿದ್ದರೆ ನಮಗೆ ಶಾಂತತೆಯ ಭಾವ ನೀಡುತ್ತದೆ. ಕಳೆದ 2-3 ದಿನಗಳಿಂದ ನಾನು ಅವರೊಂದಿಗೆ ಸಮಯ ಕಳೆಯುತ್ತಿರುವುದನ್ನು ಆನಂದಿಸಿದ್ದೇನೆ, ಇದು ನನಗೆ ಖುಷಿ ಕೊಟ್ಟಿದೆ. ನಾನು ಅವರರಿಂದ ಕ್ರಿಕೆಟ್, ನಾಯಕತ್ವ ಮತ್ತು ಸಾಧ್ಯವಾದಷ್ಟು ಅವರಿಂದ ಎಲ್ಲಾ ವಿಷಯಗಳನ್ನು ಕಲಿಯುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕ್ ಮುಗ್ಗರಿಸುವುದೇಕೆ?.. ಅದಕ್ಕೆ ಕಾರಣ ತಿಳಿಸಿದರು ಸೆಹ್ವಾಗ್..