ನವದೆಹಲಿ : 5ನೇ ಬಾರಿ ಅಂಡರ್ 19 ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಕಿರಿಯರ ತಂಡ ಇತಿಹಾಸ ಬರೆದಿದೆ. ಈ ಐತಿಹಾಸಿಕ ಸಾಧನೆ ಮಾಡಿದ ಯುವ ತಂಡವನ್ನು ಮಂಗಳವಾರ ಸಂಸತ್ತಿನಲ್ಲಿ ಪ್ರಶಂಸಿಸಲಾಯಿತು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಭಾರತ ಅಂಡರ್ 19 ತಂಡವನ್ನು ಕುರಿತು ಮಾತನಾಡುತ್ತಾ, " ಗೌರವಾನ್ವಿತ ಸದಸ್ಯರೇ, ಭಾರತದ ಅಂಡರ್-19 ಕ್ರಿಕೆಟ್ ತಂಡವು ಫೆಬ್ರವರಿ 5, 2022ರಂದು ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಅಂಡರ್ 19 ವಿಶ್ವಕಪ್ ಗೆದ್ದಿದೆ ಎಂದು ನಿಮಗೆ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.
ಕೊರೊನಾ ಜಾಗತಿಕ ಸಾಂಕ್ರಾಮಿಕದ ಸವಾಲುಗಳನ್ನು ಮೀರಿ ನಮ್ಮ ಯುವ ಆಟಗಾರರು ತಮ್ಮ ಅಸಾಧಾರಣ ಪ್ರತಿಭೆ, ಅದ್ಭುತ ಕೌಶಲ್ಯ, ಸಂಕಲ್ಪ, ಕಠಿಣ ಪರಿಶ್ರಮ ಮತ್ತು ಅತ್ಯುತ್ತಮ ಸಮರ್ಪಣೆಯಿಂದ 5ನೇ ಬಾರಿ ಟ್ರೋಫಿ ಗೆಲ್ಲುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
ಮಾತು ಮುಂದುವರಿಸಿ, ಈ ಗೆಲುವು ಖಂಡಿತವಾಗಿಯೂ ಇತರ ಆಟಗಾರರಿಗೆ ಮತ್ತು ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಸದನದ ಮತ್ತು ನನ್ನ ವೈಯಕ್ತಕವಾಗಿ 19 ವರ್ಷದೊಳಗಿನ ಭಾರತೀಯ ಕ್ರಿಕೆಟ್ ತಂಡ, ಕೋಚ್ಗಳು ಮತ್ತು ಇತರ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಯುವ ತಂಡದ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಮತ್ತು ಅವರು ತಮ್ಮ ಸಾಧನೆಗಳ ಮೂಲಕ ದೇಶವನ್ನು ಮತ್ತಷ್ಟು ಹೆಮ್ಮೆಪಡುವಂತೆ ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಭಾರತ U19 ತಂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ U19 ತಂಡವನ್ನು 4 ವಿಕೆಟ್ಗಳಿಂದ ಮಣಿಸಿ ಕಿರಿಯರ ವಿಶ್ವಚಾಂಪಿಯನ್ ಆಗಿತ್ತು. ಉಪನಾಯಕ ರಶೀದ್ 50, ನಿಶಾಂತ್ ಅಜೇಯ 50 ರನ್ಗಳಿಸಿದರೆ, ರಾಜ್ ಬಾವಾ 5 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.