ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಮನಸ್ತಾಪದ ಕುರಿತಂತೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದರು ಎಂದು ಇಂಡಿಯಾ ಅಹೆಡ್ ನ್ಯೂಸ್ ಉಲ್ಲೇಖಿಸಿದೆ.
ಹೌದು, ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯೊಂದರಲ್ಲಿ 'ಟಿ-20 ಪಂದ್ಯಗಳ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಥವಾ ಆಯ್ಕೆ ಸಮಿತಿಯ ಯಾರೂ ನನಗೆ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಸಲಹೆ ನೀಡಿರಲಿಲ್ಲ' ಎಂದು ಹೇಳಿಕೊಂಡಿದ್ದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 'ಇಷ್ಟು ಕಡಿಮೆ ಅವಧಿಯಲ್ಲಿ ನಾಯಕತ್ವ ಸ್ಥಾನವನ್ನು ತೊರೆಯಬೇಡಿ ಎಂದು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೇನೆ' ಎಂದಿದ್ದರು.
ವಿರಾಟ್ ಕೊಹ್ಲಿಯ ಹೇಳಿಕೆಯಿಂದ ಅಸಮಾಧಾನಗೊಂಡ ಸೌರವ್ ಗಂಗೂಲಿ ಶೋಕಾಸ್ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದರು. ಆದರೆ, ಕ್ರಿಕೆಟ್ ಮಂಡಳಿಯ ಇತರ ಸದಸ್ಯರು ಮನವೊಲಿಸಿದ ಕಾರಣದಿಂದ ಶೋಕಾಸ್ ನೋಟಿಸ್ ನೀಡಿರಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅದು ಮಾತ್ರವಲ್ಲದೇ ವಿರಾಟ್ ಕೊಹ್ಲಿ ರಾಜೀನಾಮೆ ನೀಡುವ ವಿಚಾರ ಸೌರವ್ ಗಂಗೂಲಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲೇ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್‌ಗೆ ಕೋವಿಡ್ ಪಾಸಿಟಿವ್