ಮುಂಬೈ : ಕಗಿಸೋ ರಬಾಡ ಮತ್ತು ಎನ್ರಿಚ್ ನೋಕಿಯಾ ಅಂತಹ ಸ್ಟಾರ್ ವೇಗಿಗಳ ನಡುವೆ ಕಳೆದ ವರ್ಷ ಎಲೆಮರೆಕಾಯಿಯಾಗಿದ್ದ ಆವೇಶ್ ಖಾನ್ ಈ ವರ್ಷ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದರು.
2017ರಲ್ಲಿ ಆರ್ಸಿಬಿ ಪರವೇ ಪದಾರ್ಪಣೆ ಮಾಡಿದ್ದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಸಾಕಷ್ಟು ಅವಕಾಶಗಳ ಕೊರತೆಯಿಂದ ವಿಫಲರಾಗಿದ್ದರು.
ಆದರೆ, ಈ ವರ್ಷ ಅರ್ಧಕ್ಕೆ ನಿಂತ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಲೀಗ್ನಲ್ಲಿ ಸ್ಟಾರ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಅವರು 8 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದು, ಅವುಗಳಲ್ಲಿ ಎಂಎಸ್ ಧೋನಿ ಮತ್ತು ಕೊಹ್ಲಿ ವಿಕೆಟ್ ತಮ್ಮ ನೆಚ್ಚಿನ ವಿಕೆಟ್ಗಳು ಎಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನನ್ನ ನೆಚ್ಚಿನ ವಿಕೆಟ್ಗಳಾಗಿವೆ.
ಅವರಿಬ್ಬರನ್ನು ಔಟ್ ಮಾಡಿದಾಗ ನನಗೆ ತುಂಬಾ ಸಂತೋಷವಾಗಿತ್ತು. ಏಕೆಂದರೆ ಅವರಿಬ್ಬರು ದಿಗ್ಗಜ ಬ್ಯಾಟ್ಸ್ಮನ್ಗಳು. ಆದರೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದಕ್ಕೆ ಯಾವುದೇ ವಿಶೇಷ ಯೋಜನೆ ರೂಪಿಸಿರಲಿಲ್ಲ.
ಕೇವಲ ಆಫ್ ಸ್ಟಂಪ್ ಮತ್ತು ನಾಲ್ಕನೇ ಸ್ಟಂಪ್ನಲ್ಲಿ ಲೈನ್ಗೆ ಅಂಟಿಕೊಳ್ಳಬೇಕೆಂದು ನಾವು ಬಯಸಿದ್ದೆವು" ಎಂದು ಖಾನ್ ಕ್ರೀಡಾ ವೆಬ್ಸೈಡ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆರ್ಸಿಬಿಯಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಡೆಲ್ಲಿ ತಂಡ ಮೆಗಾ ಹರಾಜಿನಲ್ಲಿ ಖರೀದಿಸಿತು. ಆದರೆ ಎರಡು ಆವೃತ್ತಿಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ಪಡೆದಿದ್ದೆ. ಅವಕಾಶಗಳ ಕೊರತೆಯಿಂದ ನಾನು ತುಂಬಾ ನಿರಾಶೆಗೊಳಗಾಗಿದ್ದೆ.
ಆದರೆ, ಎಲ್ಲವೂ ನನ್ನ ಕೈಯಲ್ಲಿದೆ ಎಂದು ತಿಳಿದು, ಸ್ಲೋವರ್ ಬಾಲ್, ಯಾರ್ಕರ್ ಮತ್ತು ಬೌನ್ಸರ್ಗಳ ಮೇಲೆ ಕಠಿಣ ಪರಿಶ್ರಮದಿಂದ ಕೆಲಸ ಮಾಡಿ ಸುಧಾರಿಸಿದೆ.
ಮಾನಸಿಕವಾಗಿ ನಾನು ಸಂಪೂರ್ಣ ಲೀಗ್ನಲ್ಲಿ ಆಡುತ್ತೇನೆ ಎಂದು ಸಿದ್ಧನಾಗಿದ್ದೆ ಎಂದು ತಮ್ಮ ಐಪಿಎಲ್ ತಯಾರಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ಲಂಕಾ ವಿರುದ್ಧ ಕೊಹ್ಲಿ - ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಧವನ್ ನಾಯಕನಾಗುವ ಸಾಧ್ಯತೆ?