ಮುಂಬೈ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ತಮ್ಮ ತಂಡಕ್ಕೆ 36 ರನ್ಗಳ ಗೆಲುವು ತಂದುಕೊಟ್ಟರು.
ಈಗಾಗಲೇ ಟೂರ್ನಿಯಲ್ಲಿ ಮುಂಬೈ ವಿರುದ್ಧ ಮೊದಲ ಶತಕ ಸಿಡಿಸಿದ್ದ ರಾಹುಲ್ 2ನೇ ಮುಖಾಮುಖಿಯಲ್ಲೂ ಶತಕ ಸಾಧನೆ ಮಾಡಿದರು. ಇದು ಐಪಿಎಲ್ನಲ್ಲಿ ರಾಹುಲ್ ಅವರ 4ನೇ ಶತಕವಾಗಿದೆ. ಒಟ್ಟಾರೆ ಟಿ-20 ಕ್ರಿಕೆಟ್ನಲ್ಲಿ ಅವರ 6ನೇ ಶತಕವಾಗಿದೆ.
ಭಾರತದ ಪರ ಟಿ- 20 ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಾಹುಲ್ ಪ್ರಸ್ತುತ ಟೀಮ್ ಇಂಡಿಯಾ ನಾಯಕನಾಗಿರುವ ರೋಹಿತ್ ಶರ್ಮಾ ಅವರ ಜೊತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ರಾಹುಲ್ 167 ಟಿ-20 ಇನ್ನಿಂಗ್ಸ್ಗಳಲ್ಲಿ 6 ಶತಕ ಸಿಡಿಸಿದ್ದಾರೆ. ಇದರಲ್ಲಿ 4 ಐಪಿಎಲ್ ಮತ್ತು 2 ಭಾರತದ ಪರ ಬಂದಿವೆ. ರೋಹಿತ್ ಶರ್ಮಾ 378 ಇನ್ನಿಂಗ್ಸ್ಗಳಿಂದ 6 ಶತಕ ಸಿಡಿಸಿದ್ದು, ಭಾರತದ ಪರ 4 ಹಾಗೂ ಐಪಿಎಲ್ ಮತ್ತು ಸೈಯದ್ ಮುಸ್ತಾಕ್ ಅಲಿ ಟಿ-20ಯಲ್ಲಿ ತಲಾ ಒಂದು ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 334 ಇನ್ನಿಂಗ್ಸ್ಗಳಿಂದ 5 ಶತಕ ಸಿಡಿಸಿದ್ದು, ಎಲ್ಲಾ ಐಪಿಎಲ್ನಲ್ಲಿ ಬಂದಿವೆ.
ಐಪಿಎಲ್ನಲ್ಲಿ 4ನೇ ಶತಕ: ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲಿ ಹೆಚ್ಚು ಶತಕ ಸಿಡಿಸಿದ 4ನೇ ಬ್ಯಾಟರ್ ಎಂಬ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್ ಗೇಲ್ 6 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 5, ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ ತಲಾ 4 ಶತಕ ಸಿಡಿಸಿದ್ದಾರೆ. ಇದೀಗ ರಾಹುಲ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಜಾಸ್ ಬಟ್ಲರ್ ತಲಾ 4 ಶತಕ ಸಿಡಿಸಿ ವಾರ್ನರ್ ಮತ್ತು ವಾಟ್ಸನ್ ಜೊತೆಗೆ ಜಂಟಿ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಮುಂಬೈ ವಿರುದ್ಧ 3 ಶತಕ: ರಾಹುಲ್ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ 3 ಶತಕ ದಾಖಲಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ, ಡೇವಿಡ್ ವಾರ್ನರ್ ಕೆಕೆಆರ್ ಮತ್ತು ಕ್ರಿಸ್ ಗೇಲ್ ಪಂಜಾಬ್ ವಿರುದ್ಧ ವಿರುದ್ಧ ತಲಾ 2 ಶತಕ ಸಿಡಿಸಿದ್ದರು.
ಇದನ್ನೂ ಓದಿ:ಸಿಎಸ್ಕೆ ತಂಡಕ್ಕೆ ಏಪ್ರಿಲ್ 25 ಭಾರಿ ಅದೃಷ್ಟ.. 2010ರಿಂದ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ!