ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಆ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಸ್ಥಾನ ನೀಡಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಏಪ್ರಿಲ್ 15 ರಂದು ಬಿಸಿಸಿಐ ಪ್ರಕಟಿಸಿದ್ದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿತ್ತು.
ಬೂಮ್ರಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆಗೆ ತಂಡಕ್ಕೆ ಸೇರುವ ನಿರೀಕ್ಷೆ ಮಾಡಲಾಗಿತ್ತು. ಬಹಳ ಕಾಲದಿಂದ ಅವರು ತಂಡದಿಂದ ಹೊರಗಿದ್ದು, ಎನ್ಸಿಎಯಲ್ಲಿ ಇರುವ ಕಾರಣ ಜೂನ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಯನ್ನು ಹೇಳಲಾಗಿತ್ತು. ಆದರೆ ತಂಡದ ಪ್ರಕಟಿಸಿರುವ ಪಟ್ಟಿಯಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಸಿರಾಜ್, ಶಮಿ, ಶಾರ್ದೂಲ್, ಉಮೇಶ್ ಮತ್ತು ಉನಾದ್ಕತ್ಗೆ ವೇಗದ ವಿಭಾಗದಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ಸಂಪೂರ್ಣ ಚೇತರಿಕೆ ಆಗುವವರೆಗೆ ಅವರನ್ನು ಮೈದಾನಕ್ಕೆ ಇಳಿಸುವ ತೊಂದರೆಯನ್ನು ಬಿಸಿಸಿಐ ತೆಗೆದುಕೊಂಡಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಆಯ್ಕೆಗಾರರು ಅಜಿಂಕ್ಯ ರಹಾನೆಗೆ ಮಣೆಹಾಕಿದ್ದಾರೆ. ಈ ಹಿಂದೆ ಭಾರತ ತಂಡದಲ್ಲಿ ಆಡಿರುವ ಅನುಭವ ಇರುವ ರಹಾನೆಗೆ ಈ ಬಾರಿಯ ಐಪಿಎಲ್ನ ಪ್ರದರ್ಶನದ ಆಧಾರದಲ್ಲಿ ಅವಕಾಶ ಸಿಕ್ಕಿದೆ. ಶ್ರೇಯಸ್ ಅಯ್ಯರ್ ಬದಲಿ ಸ್ಥಾನವನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸೂರ್ಯ ಕುಮಾರ್ ಯಾದವ್ಗೆ ನೀಡಲಾಗಿತ್ತು. ಆದರೆ ಒಂದು ಇನ್ನಿಂಗ್ಸ್ನಲ್ಲಿ ಎಂಟು ರನ್ ಮಾತ್ರ ಗಳಿಸಿದ ಸೂರ್ಯ ಅವರಿಗೆ ಮತ್ತೆ ಟೆಸ್ಟ್ನಲ್ಲಿ ತಮ್ಮನ್ನು ಸಾಬೀತು ಪಡಿಸಿಕೊಳ್ಳಲು ಅವಕಾಶ ಸಿಕ್ಕಿಲ್ಲ.
ರಹಾನೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದು ಅವರಿಗೆ ಅಂತರಾಷ್ಟ್ರೀಯ ತಂಡಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿದೆ. ರಹಾನೆ ಅವರ ಫಾರ್ಮ್ನ್ನು ಹೀಗೆ ಮುಂದುವರೆಸಿದರೆ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲೂ ಸ್ಥಾನ ಪಡೆಯಲಿದ್ದಾರೆ.
ಐಪಿಎಲ್ನಿಂದ ಹೊರಗುಳಿದಿರುವ ಜಸ್ಪಿತ್ ಬೂಮ್ರಾ ಅವರು ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡುವ ನಿರೀಕ್ಷೆ ಇತ್ತು. ಭಾರತದ ಸ್ಟಾರ್ ಬೌಲರ್ ಆಗಿರುವ ಬೂಮ್ರಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಬಿಸಿಸಿಐ ನೀಡಿಲ್ಲ. ಆದರೆ ಭಾರತದಲ್ಲಿರುವ ವಿಶ್ವಕಪ್ ಹಿನ್ನೆಲೆಯಲ್ಲಿ ಬೂಮ್ರಾ ಅವರ ಮೇಲೆ ಒತ್ತಡ ಹಾಕಲಾಗಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಬ್ಯಾಟಿಂಗ್ ಫಾರ್ಮ್ ಬಗ್ಗೆ ಟೀಕೆಗೆ ಒಳಗಾದ ಕೆಎಲ್ ರಾಹುಲ್ ಚಾಂಪಿಯನ್ ಶಿಪ್ಗೆ ಅವಕಾಶ ಮಾಡಿಕೊಡಲಾಗಿದೆ. ಅದರ ಜೊತೆಗೆ ವಿಕೆಟ್ ಕೀಪರ್ ಸ್ಥಾನಕ್ಕೆ ಕಿಶನ್ ಕಿಶನ್ ಬಿಟ್ಟು ಶ್ರೀಕರ್ ಭರತ್ ಅವರನ್ನೇ ಮತ್ತೆ ಆಯ್ಕೆ ಮಾಡಲಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಭರತ್ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಕೀಪಿಂಗ್ ನಿರ್ವಹಣೆ ಬಗ್ಗೆ ಉತ್ತಮ ಅಭಿಪ್ರಾಯ ಬಂದ ಕಾರಣ ಆಯ್ಕೆಯಾಗಿದ್ದಾರೆ.
ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಇದನ್ನೂ ಓದಿ: ಐಪಿಎಲ್ ಅದ್ಭುತ ಪ್ರದರ್ಶನ ಮಧ್ಯಮ ಕ್ರಮಾಂಕಕ್ಕೆ ರಹಾನೆಗೆ ಸ್ಥಾನ: ಸ್ಕೈಗೆ ಕೊಕ್