ಮುಂಬೈ: ಗಾಯದ ಕಾರಣ ತಂಡದಿಂದ ಹೊರಬಿದ್ದ ಸಂದರ್ಭದಲ್ಲಿ ಅಶ್ವಿನ್ ಮತ್ತು ಜಡೇಜಾ ತಂಡಕ್ಕೆ ಉತ್ತಮ ಪ್ರದರ್ಶನ ತೋರಿದರು. ಅದರಲ್ಲೂ ಜಡೇಜಾ ಅವರು ಅದ್ಭುತ ಪ್ರದರ್ಶನ ಮುಂದುವರೆಸಿದರಿಂದ ತಂಡದಲ್ಲಿ ನನಗೆ ಅವಕಾಶ ತಪ್ಪಿತು ಎಂದು 6 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿರುವ ಅಕ್ಷರ್ ಪಟೇಲ್ ಹೇಳಿದ್ದಾರೆ.
2014ರಲ್ಲಿ ಏಕದಿನ ಮತ್ತು 2015ರಲ್ಲಿ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ್ದ ಆಲ್ರೌಂಡರ್ ಪಟೇಲ್ 6 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಆಯ್ಕೆಯಾಗಿದ್ದಾರೆ. ಆದರೆ ಇಷ್ಟು ವರ್ಷ ತಮಗೆ ಅವಕಾಶ ಸಿಗದಿದ್ದಕ್ಕೆ ಅಶ್ವಿನ್ ಮತ್ತು ಜಡೇಜಾ ಅವರ ಪ್ರದರ್ಶನವೇ ಕಾರಣ. ಆದರೆ ನನಗೆ ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ತೋರುತ್ತೇನೆ ಎಂದು ಹೇಳಿದ್ದಾರೆ.
"ನನಲ್ಲಿ ಕೊರತೆಗಳಿವೆ ಎಂದು ನಾನು ಭಾವಿಸುವುದಿಲ್ಲ. ದುರಾದೃಷ್ಟವಶಾತ್, ಗಾಯದ ಸಮಸ್ಯೆಯಿಂದ ಏಕದಿನ ತಂಡದಲ್ಲಿ ಅವಕಾಶ ಕಳೆದುಕೊಂಡೆ. ಆದರೆ, ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ಬೌಲರ್ಗಳಾಗಿದ್ದರು. ಅದರಲ್ಲೂ ಜಡೇಜಾ ನೀಡುತ್ತಿದ್ದ ಪ್ರದರ್ಶನದಿಂದ, ತಂಡದಲ್ಲಿ ಬೇರೆ ಯಾವುದೇ ಎಡಗೈ ಸ್ಪಿನ್ನರ್‌ಗೆ ಅವಕಾಶ ತುಂಬಾ ಕಷ್ಟವಾಗಿತ್ತು. ರಿಸ್ಟ್ ಸ್ಪಿನ್ನರ್ಗಳಾದ ಕುಲ್ದೀಪ್ ಮತ್ತು ಚಹಲ್ ಕೂಡ ಉತ್ತಮವಾಗಿದ್ದರು. ತಂಡದ ಸಂಯೋಜನೆಯ ದೃಷ್ಟಿಯಿಂದ ನಾನು ಹೊರಗುಳಿಯಬೇಕಾಯಿತು. ಆದರೆ ಯಾವಾಗ ನಾನು ಅವಕಾಶ ಪಡೆಯುತ್ತೇನೋ, ಅಂದು ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೆ"ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಡೇಜಾ ಬದಲು ಅವಕಾಶ ಪಡೆದಿದ್ದ ಅಕ್ಷರ್ ಪಟೇಲ್ 27 ವಿಕೆಟ್ ಪಡೆದಿದ್ದರು. 4 ಬಾರಿ 5 ವಿಕೆಟ್ ಸಾಧನೆ ಮಾಡಿ, ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಅವಕಾಶ ಪಡೆದಿದ್ದಾರೆ.
ಇದನ್ನು ಓದಿ: ನನ್ನನ್ನು ಫ್ರಾಂಚೈಸಿ ಏಕೆ ರೀಟೈನ್ ಮಾಡಿಕೊಳ್ಳಬೇಕು ಎಂದು ಸ್ವತಃ ಧೋನಿ ಆಲೋಚಿಸಲಿ: ಆಕಾಶ್ ಚೋಪ್ರಾ