ಬರ್ಮಿಂಗ್ಹ್ಯಾಮ್: ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಐದನೇ ಟೆಸ್ಟ್ನ ಎರಡನೇ ದಿನ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ 35 ರನ್ ನೀಡಿ ಮತ್ತೊಮ್ಮೆ ದುಬಾರಿ ಬೌಲಿಂಗ್ನಿಂದ ಸುದ್ದಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸಹ ಬೌಲರ್ ಜೇಮ್ಸ್ ಆ್ಯಂಡರ್ಸನ್, ಇದು ಬಹಳ ದುರದೃಷ್ಟಕರ ಎಂದು ಸಹ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಪಂದ್ಯದ ಎರಡನೇ ದಿನವಾದ ಶನಿವಾರ ಬ್ರಾಡ್ ಎಸೆದ 84ನೇ ಓವರ್ನಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ್ದರು. ಈ ಓವರ್ನಲ್ಲಿ ವೈಡ್, ಬೈ ಹಾಗೂ ನೋಬಾಲ್ ಸೇರಿದಂತೆ 35 ರನ್ ಹರಿದುಬಂದಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ದುಬಾರಿ ಓವರ್ ಎಂಬ ಕೆಟ್ಟ ಹಣೆಪಟ್ಟಿ ಬ್ರಾಡ್ ಪಾಲಾಗಿದೆ. ಅಲ್ಲದೆ, ಈ ಓವರ್ 2007ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಬಾರಿಸಿದ್ದ 6 ಸಿಕ್ಸರ್ ನೆನಪು ಮರುಕಳಿಸುವಂತೆ ಮಾಡಿತು.
ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಆ್ಯಂಡರ್ಸನ್, ಬುಮ್ರಾ ಅವರು ಮೊದಲ ಬಾಲ್ನ್ನು ಬಾರಿಸಿದ್ದಾಗ ಫೀಲ್ಡರ್ ಕ್ಯಾಚ್ ಪಡೆದಿದ್ದರೆ, ಬ್ರಾಡ್ರ ಈ ಓವರ್ ಚರ್ಚೆಗೆ ಬರುತ್ತಲೇ ಇರಲಿಲ್ಲ. ಅವರಿಗೆ ಅದೃಷ್ಟವಿರಲಿಲ್ಲ, ಇದು ತುಂಬಾ ದುರದೃಷ್ಟಕರ ಅನ್ನಿಸುತ್ತದೆ. ಈ ಓವರ್ನಲ್ಲಿ ಸಾಕಷ್ಟು ರನ್ಗಳು ಟಾಪ್ ಎಡ್ಜ್ ಶಾಟ್ಗಳಿಂದಲೇ ಬಂದವು. ಕೆಲವು ಉತ್ತಮ ಹೊಡೆತಗಳೂ ಇದ್ದವು. ಮುಂದೊಂದು ದಿನ ಅದೃಷ್ಟ ಸ್ಟುವರ್ಟ್ ಜೊತೆಗಿದ್ದರೆ ಟಾಪ್ ಎಡ್ಜ್ಗಳು ಫೀಲ್ಡರ್ಗಳ ಕೈಸೇರಬಹುದು ಎಂದರು.
ಮುಂದುವರಿದು ಮಾತನಾಡಿದ ಆಂಗ್ಲರ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಆ್ಯಂಡರ್ಸನ್, ಕೆಲವೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್ಗಳಿಗೆ ಬೌಲ್ ಮಾಡುವುದು ಸುಲಭ, ಆದರೆ ಬಾಲಂಗೋಚಿಗಳಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣ. ನಿಮ್ಮ ಉತ್ತಮ ಎಸೆತವು ಅಂತಿಮವಾಗಿ ಯಶಸ್ಸು ನೀಡುತ್ತದೆ, ಪ್ರಯತ್ನ ಅಗತ್ಯ ಎಂದರು.
ಇದನ್ನೂ ಓದಿ: ಯಾರ್ಕರ್ ಕಿಂಗ್ ವಿಶ್ವ ದಾಖಲೆ: ಟೆಸ್ಟ್ನ ಒಂದೇ ಓವರ್ನಲ್ಲಿ 35ರನ್ ಸಿಡಿಸಿ ಲಾರಾ ದಾಖಲೆ ಮುರಿದ ಬುಮ್ರಾ