ಮುಂಬೈ : ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ 2022ರ ಐಪಿಎಲ್ಗೆ ನೂತನ ತಂಡವಾಗಿ ಸೇರ್ಪಡೆಗೊಂಡಿರುವ ಲಖನೌ ಫ್ರಾಂಚೈಸಿಯ ಟೀಂ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಜಿಂಬಾಬ್ವೆ ನಾಯಕ ಆ್ಯಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದ ಬೆನ್ನಲ್ಲೇ ಮುಂಬರುವ ಮೆಗಾ ಹರಾಜಿನಲ್ಲಿ ನೆರವಾಗುವುದಕ್ಕಾಗಿ ಗಂಭೀರ್ರನ್ನು ಮಾರ್ಗದರ್ಶನಕನಾಗಿ ಆಯ್ಕೆ ಮಾಡಲಾಗಿದೆ. ಗಂಭೀರ್ 2012 ಮತ್ತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಗಂಭೀರ್ ಕೆಕೆಆರ್ ತಂಡದ ನಾಯಕನಾಗಿ ಐಪಿಎಲ್ನಲ್ಲಿ ಸಾಬೀತಾಗಿರುವ ದಾಖಲೆಗಳನ್ನು ತಮ್ಮೊಂದಿಗೆ ತಂದಿದ್ದಾರೆ. ಅವರು ಲಖನೌ ಫ್ರಾಂಚೈಸಿ ಬಯಸುವಂತೆ ಯುವ ಪ್ರತಿಭೆಗಳನ್ನು ಬೆಳೆಸುವ ಒಲವು ಹೊಂದಿದ್ದಾರೆ. ಅವರಿಂದ ಐಪಿಎಲ್ನಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಠಿಣ ಉಪಕ್ರಮವನ್ನು ನಿರೀಕ್ಷಿಸಲಾಗಿದೆ ಎಂದು ಫ್ರಾಂಚೈಸಿಯ ಮೂಲ ತಿಳಿಸಿದೆ.
ಇನ್ನು ಅಧಿಕೃತ ಹೆಸರನ್ನು ಹೊಂದಿಲ್ಲದ ಲಖನೌ ಫ್ರಾಂಚೈಸಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ರನ್ನು ನಾಯಕನನ್ನಾಗಿ ನೇಮಿಸುವ ಆಶಯದಲ್ಲಿದೆ. ಇದೀಗ ಅನುಭವಿಗಳಾದ ಗಂಭೀರ್ ಮತ್ತು ಆ್ಯಂಡಿ ಫ್ಲವರ್ರನ್ನು ತಂಡದ ಬೆಂಬಲ ಸಿಬ್ಬಂದಿಯಾಗಿ ಆಯ್ಕೆ ಮಾಡಿಕೊಂಡಿದೆ.
ಸಂಜೀವ್ ಗೋಯಂಕ ನೇತೃತ್ವದ ಆರ್ಪಿಎಸ್ಜಿ ಗುಂಪು 7090 ಕೋಟಿ ರೂ.ಗಳಿಗೆ ಲಖನೌ ಫ್ರಾಂಚೈಸಿಯನ್ನು ಖರೀದಿಸಿತ್ತು. ಈ ಹಿಂದೆಯೂ ಈ ಗುಂಪು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಮಾಲೀಕರಾಗಿದ್ದರು.
ಇದನ್ನೂ ಓದಿ:ಕನ್ನಡಿಗ ಕೆ ಎಲ್ ರಾಹುಲ್ಗೆ ಭಾರತ ಟೆಸ್ಟ್ ತಂಡದ ಉಪನಾಯಕನ ಪಟ್ಟ