ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ವಿದೇಶದಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಕಾರಣ ಜೂನ್ 7 ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಿಂದ ಹೊರಗುಳಿಯಲಿದ್ದಾರೆ. ಈ ಬಾರಿ ಐಪಿಎಲ್ ಅನ್ನು ಸಹ ಅವರು ಮಿಸ್ ಮಾಡಿಕೊಂಡಿದ್ದಾರೆ. ಬಿಸಿಸಿಐ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದ ಅಯ್ಯರ್ ಹೆಚ್ಚೂ ಕಡಿಮೆ 5 ತಿಂಗಳು ಕ್ರಿಕೆಟ್ನಿಂದ ದೂರವೇ ಉಳಿಯಬೇಕಾಗುತ್ತದೆ. ಹೀಗಾಗಿ ವರ್ಷಾಂತ್ಯದ ಪಂದ್ಯಗಳ ವೇಳೆಗೆ ಲಭ್ಯವಾಗುವ ಸಾಧ್ಯತೆ ಇದೆ. ಅಂದರೆ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಸಂಪೂರ್ಣ ಚೇತರಿಸಿಕೊಂಡು ತಂಡ ಸೇರುವ ಸಾಧ್ಯತೆ ಇದೆ.
"ಹೌದು, ಅವರು ವಿದೇಶದಲ್ಲಿ ಅವರ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಪೂರ್ಣ ಪುನರ್ವಸತಿಯೊಂದಿಗೆ ಕನಿಷ್ಠ ಐದು ತಿಂಗಳ ಕಾಲ ಚಟುವಟಿಕೆಯಿಂದ ಹೊರಗುಳಿಯುವ ಸಾಧ್ಯತೆ ಇದೆ" ಬಿಸಿಸಿಐ ಮೂಲದಿಂದ ಮಾಹಿತಿ ದೊರೆತಿದೆ.
ಶ್ರೇಯಸ್ ಅಯ್ಯರ್ 2022ರ ನ್ಯೂಜಿಲೆಂಡ್ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿದ್ದರು. ನಂತರ ಚೇತರಿಸಿಕೊಂಡ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಈ ಪ್ರವಾಸದಲ್ಲೂ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಯ ನಂತರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಆರ್ಸಿಬಿಗೆ ಮತ್ತೆ ಶಾಕ್: IPL ಆವೃತ್ತಿಯಿಂದಲೇ ಈ ಆಟಗಾರ ಹೊರಕ್ಕೆ
ಆಸ್ಟ್ರೇಲಿಯಾ 3ನೇ ಟೆಸ್ಟ್ ವೇಳೆ ಗಾಯ: ಸಂಪೂರ್ಣ ಚೇತರಿಕೆ ಆಗದ ಕಾರಣ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಅಯ್ಯರ್‌ರನ್ನು ಆಡಿಸಿರಲಿಲ್ಲ. ಅವರ ಬದಲಿಗೆ ಸೂರ್ಯ ಕುಮಾರ್ ಯಾದವ್ ಅವರಿಗೆ ಅವಕಾಶ ನೀಡಲಾಗಿತ್ತು. ಎರಡನೇ ಟೆಸ್ಟ್ ವೇಳೆಗೆ ಚೇತರಿಸಿಕೊಂಡಿದ್ದ ಅಯ್ಯರ್ ಆಡುವ ಹನ್ನೊಂದರ ಬಳಗ ಸೇರಿದ್ದರು. ಮೂರನೇ ಟೆಸ್ಟ್ ವೇಳೆ ಜಿಮ್ನಲ್ಲಿ ಕಸರತ್ತು ಮಾಡುವಾಗ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ಸ್ಕ್ಯಾನ್ಗೆ ಕಳಿಸಿರುವುದಾಗಿ ಬಿಸಿಸಿಐ ತಿಳಿಸಿತ್ತು. ನಾಲ್ಕನೇ ಟೆಸ್ಟ್ಗೂ ತಂಡ ಸೇರಿರಲಿಲ್ಲ.
ಏಕದಿನ ಸರಣಿಯಿಂದಲೂ ಹೊರಕ್ಕೆ: ಆಸ್ಟ್ರೇಲಿಯಾ ವಿರುದ್ಧ ನಿಗದಿಯಾಗಿದ್ದ ಮೂರು ಏಕದಿನ ಪಂದ್ಯಗಳ ಸರಣಿಗೆ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಗಾಯಗೊಂಡಿದ್ದ ಅವರ ಬದಲಿ ಆಟಗಾರರನನ್ನು ಬಿಸಿಸಿಐ ಘೋಷಿಸಲಿಲ್ಲ. ಮೂರು ಪಂದ್ಯದಲ್ಲಿ ಅವರ ಜಾಗದಲ್ಲಿ ಸೂರ್ಯ ಕುಮಾರ್ ಅವರು ಕಣಕ್ಕಿಳಿದಿದ್ದರು.
ಅಯ್ಯರ್ ಬದಲಿಗೆ ರಾಣಾಗೆ ನಾಯಕತ್ವ: ಈ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನಾಯಕತ್ವ ಅಯ್ಯರ್ ಅನುಪಸ್ಥಿತಿಯಲ್ಲಿ ಯಾರಿಗೆ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಸುನಿಲ್ ನರೈನ್ ಮತ್ತು ಶಾರ್ದೂಲ್ ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಚ್ಚರಿಯ ತೀರ್ಮಾನದಂತೆ ನಿತೀಶ್ ರಾಣಾಗೆ ತಂಡ ಕ್ಯಾಪ್ಟನ್ಸಿ ಒಲಿದುಬಂದಿತ್ತು.
ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಕುಳಿತು ಡೆಲ್ಲಿ-ಗುಜರಾತ್ IPL ಪಂದ್ಯ ವೀಕ್ಷಿಸುತ್ತಿರುವ ರಿಷಭ್ ಪಂತ್!’