ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇ- ಆಫ್ ರೇಸ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಹೊರಬಿದ್ದಿದೆ. ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ರವೀಂದ್ರ ಜಡೇಜಾ, ಮಧ್ಯದಲ್ಲೇ ಧೋನಿ ಹೆಗಲಿಗೆ ತಮ್ಮ ಜವಾಬ್ದಾರಿ ಮರಳಿಸಿದ್ದರು. ಇದೀಗ ಮುಂದಿನ ವರ್ಷದ ಟೂರ್ನಿಗೋಸ್ಕರ ವಿರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ.
ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಬಳಿ ಧೋನಿ ನಿರೀಕ್ಷೆಯ ಎಲ್ಲ ಅರ್ಹತೆಗಳಿದ್ದು, ಆತ ತಂಡಕ್ಕೆ ದೀರ್ಘಾವಧಿಯ ನಾಯಕನಾಗಬಹುದು ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಗಾಯಕ್ವಾಡ್ ಚೆನ್ನೈ ತಂಡದ ದೀರ್ಘಾವಧಿ ನಾಯಕನಾಗಿ ಆಯ್ಕೆ ಮಾಡಬಹುದಾಗಿದೆ ಎಂದಿದ್ದಾರೆ. 2021ರಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ಋತುರಾಜ್ ಈ ಸಲದ ಟೂರ್ನಿಯ ಕೆಲವೊಂದು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಮುಂದಿನ 3-4 ಸೀಸನ್ಗಳನ್ನ ಋತುರಾಜ್ ಗಾಯಕ್ವಾಡ್ ಆಡಿದರೆ, ತಂಡಕ್ಕೆ ದೀರ್ಘಾವಧಿ ನಾಯಕನಾಗಬಲ್ಲರು. ಅವರಲ್ಲಿ ಒತ್ತಡ ನಿಭಾಯಿಸುವ ಗುಣವಿದ್ದು, ಕೂಲ್ ಆಗಿರುತ್ತಾರೆ ಎಂದಿದ್ದಾರೆ. ಈಗಾಗಲೇ ಮಹಾರಾಷ್ಟ್ರ ತಂಡ ಮುನ್ನಡೆಸಿರುವ ಅನುಭವ ಸಹ ಅವರಲ್ಲಿ ಇದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಸಿಎಸ್ಕೆ ಈ ಸಲದ ಟೂರ್ನಿಯಲ್ಲಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ.