ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ರೌಂಡರ್ ಆಂಡ್ರೆ ರಸೆಲ್ ತಮ್ಮ ಟಿ20 ವೃತ್ತಿಜೀವನದ 600ನೇ ಸಿಕ್ಸರ್ ಸಿಡಿಸಿದರು. ಹೈದರಾಬಾದ್ನ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ ಬೌಲಿಂಗ್ ವೇಳೆ ಸಿಕ್ಸರ್ ಸಿಡಿಸುವ ಮೂಲಕ ರಸೆಲ್ ಚುಟುಕು ಕ್ರಿಕೆಟ್ ಮಾದರಿಯಲ್ಲಿ 600 ಸಿಕ್ಸರ್ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ತಲುಪಿದರು. ಟಿ20 ಮಾದರಿಯಲ್ಲಿ ರಸೆಲ್ ಮೂರನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದು, 400 ಬೌಂಡರಿಗಳನ್ನು ಬಾರಿಸಿದ್ದಾರೆ.
ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ದೈತ್ಯ ಕ್ರಿಸ್ ಗೇಲ್ (1,056 ಸಿಕ್ಸರ್) ಮತ್ತು ಕೀರಾನ್ ಪೊಲಾರ್ಡ್ (812 ಸಿಕ್ಸರ್) ಇದ್ದಾರೆ. ರಸೆಲ್ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ಸ್ಪೋಟಕ ಬ್ಯಾಟರ್ ಬ್ರೆಂಡನ್ ಮೆಕಲಮ್ (485 ಸಿಕ್ಸರ್) ಮತ್ತು ಕಾಲಿನ್ ಮುನ್ರೊ (480 ಸಿಕ್ಸರ್) ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ, ಈವರೆಗೂ ರಸೆಲ್ 188 ಸಿಕ್ಸರ್‌ಗಳನ್ನು ಹೊಡೆದು 10ನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಕ್ರಿಸ್ ಗೇಲ್ 355 ಸಿಕ್ಸರ್‌ಗಳ ಮೂಲಕ ಐಪಿಎಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದವರು: ವಿಶ್ವದ ಹಲವಾರು ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಾರೆ. ಐಪಿಎಲ್ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಯ ಲೀಗ್ ಕೂಡಾ ಹೌದು. ದೇಶ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಕ್ರಿಕ್ರೆಟ್ ಪ್ರಿಯರು ಐಪಿಎಲ್ ವೀಕ್ಷಣೆ ಮಾಡುತ್ತಾರೆ.
ಈ ಸಲದ ಐಪಿಎಲ್ ಲೀಗ್ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಮೊದಲನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಇದ್ದಾರೆ.
9 ಪಂದ್ಯಗಳನ್ನು ಆಡಿರುವ ಡುಪ್ಲೆಸಿಸ್ 28 ಸಿಕ್ಸರ್ ಸಿಡಿಸಿದ್ದು, ಋತುವಿನಲ್ಲಿ 446 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಅತೀ ಹೆಚ್ಚು ಸ್ಕೋರರ್ ಆಗಿ ಅಗ್ರಸ್ಥಾನದಲ್ಲಿದ್ದಾರೆ. ಇದರಲ್ಲಿ 5 ಅರ್ಧಶತಕಗಳಿದ್ದು, 159.58 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಎರಡನೇ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸವೆಲ್ ಇದ್ದು 9 ಪಂದ್ಯಗಳಲ್ಲಿ 23 ಸಿಕ್ಸರ್ ಸಿಡಿಸಿ 226 ರನ್ ಕಲೆ ಹಾಕಿದ್ದಾರೆ. 183.21 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಿವಂ ದುಬೆ ಮೂರನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 21 ಸಿಕ್ಸರ್ ಸಿಡಿಸಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಲಕ್ನೋ ತಂಡದ ಕೈಲ್ ಮೇಯರ್ಸ್ ಇದ್ದು, 10 ಪಂದ್ಯಗಳಲ್ಲಿ 20 ಸಿಕ್ಸರ್ ಸಿಡಿಸಿದ್ದಾರೆ. 311 ರನ್ ಕಲೆ ಹಾಕಿರುವ ಇವರು 152.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
5ನೇ ಸ್ಥಾನದಲ್ಲಿ ಕೋಲ್ಕತ್ತಾ ತಂಡದ ರಿಂಕು ಸಿಂಗ್ ಇದ್ದು, 9 ಪಂದ್ಯಗಳಲ್ಲಿ ಒಟ್ಟು 19 ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: ತಮ್ಮ ರೆಸ್ಟೋರೆಂಟ್ಗೆ ಆರ್‌ಸಿಬಿ ಆಟಗಾರರನ್ನು ಆಹ್ವಾನಿಸಿ ಅದ್ಧೂರಿ ಔತಣ ನೀಡಿದ ಕಿಂಗ್ ಕೊಹ್ಲಿ