ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಇನ್ನೂ ತಿಂಗಳೂ ಬಾಕಿ ಇಲ್ಲ. ಹೀಗಿರುವಾಗ ಭಾರತ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಕೆಎಲ್ ರಾಹುಲ್ ಗಾಯದಿಂದಾಗಿ ತಂಡದಿಂದ ಹೊರಗುಳಿದರೆ, ಜಯದೇವ್ ಉನಾದ್ಕತ್ ಮತ್ತು ಉಮೇಶ್ ಯಾದವ್ ಇನ್ನೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ವರದಿಯೊಂದರ ಪ್ರಕಾರ ಉನಾದ್ಕತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡಲಿದ್ದಾರೆ ಎನ್ನಲಾಗಿದೆ.
ಜೂನ್ 7 ರಿಂದ 11ರ ವರೆಗೆ (12 ಮೀಸಲು ದಿನ)ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವನ್ನು ಆಡಲಿದೆ. ಭಾರತ ಪಂದ್ಯಕ್ಕಾಗಿ ಕಳೆದ ತಿಂಗಳಲ್ಲಿ ತಂಡವನ್ನು ಪ್ರಕಟಿಸಿತ್ತು. ಮೇ 1 ರಂದು ನಡೆಯುತ್ತಿರುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕಾಗಿ ಲಖನೌ ಸೂಪರ್ ಜೈಂಟ್ಸ್ನ ವೇಗದ ಬೌಲರ್ ಉನಾದ್ಕತ್ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಲಕ್ನೋ ನಾಯಕ ಕೆಎಲ್ ರಾಹುಲ್ ಗಾಯಗೊಂಡರು.
ರಾಹುಲ್ ಗಂಭೀರ ಗಾಯಕ್ಕೆ ಒಳಗಾಗಿರುವುದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿತ್ತಲ್ಲದೇ ಅವರ ಬದಲಿಯಾಗಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಂಡದ ಸದಸ್ಯರಾಗಿ ಪ್ರಕಟಿಸಿತ್ತು. ಈ ವೇಳೆ, ಸ್ಟ್ಯಾಂಡ್‌ಬೈ ಆಟಗಾರರಾಗಿ ಮುಖೇಶ್ ಕುಮಾರ್ ಅವರನ್ನು ಬೌಲಿಂಗ್ ವಿಭಾಗಕ್ಕೆ ಪ್ರಕಟಿಸಿತ್ತು. ಹಾಗೇ ಬ್ಯಾಟಿಂಗ್ನಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ರುತುರಾಜ್ ಗಾಯಕ್ವಾಡ್ ಅವರನ್ನು ಹೆಸರಿಸಿತ್ತು.
ಸದ್ಯ ಬಂದಿರುವ ವರದಿಯೊಂದರ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಗಾಗಿರುವ ಜಯದೇವ್ ಉನಾದ್ಕತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪ್ರಕಟಿತ ತಂಡದಲ್ಲಿದ್ದ ಉಮೆಶ್ ಯಾದವ್ ಅವರು ಸಹ ಗಾಯಕ್ಕೆ ಒಳಗಾಗಿದ್ದು, ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಉಮೇಶ್ ಅವರಿಗೆ ಕೆಕೆಆರ್ನ ವೈದ್ಯಕೀಯ ತಂಡದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರದಿಂದ ಮತ್ತೆ ಅಭ್ಯಾಸಕ್ಕೆ ಮರಳಲಿರುವ ಜಯದೇವ್: ವರದಿಯಲ್ಲಿ ಮೂಲಗಳು ತಿಳಿಸಿರುವಂತೆ, "ಜಯದೇವ್ ಉನದ್ಕತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ಪ್ರಸ್ತುತ ಎನ್‌ಸಿಎಯಲ್ಲಿ ತಮ್ಮ ಪುನರ್ವಸತಿಗೆ ಒಳಗಾಗಿದ್ದಾರೆ. ಅವರು ಸೋಮವಾರದಿಂದ ನೆಟ್ಸ್‌ನಲ್ಲಿ ಮತ್ತೆ ಬೌಲಿಂಗ್ ಮಾಡಲು ಪ್ರಾರಂಭಿಸುತ್ತಾರೆ" ಎಂದು ಹೇಳಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್)
ಸ್ಟ್ಯಾಂಡ್‌ಬೈ ಆಟಗಾರರು: ರುತುರಾಜ್ ಗಾಯಕ್‌ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ: ಕೆ ಎಲ್ ರಾಹುಲ್, ಉನಾದ್ಕತ್ಗೆ ಮುಂಬೈನಲ್ಲಿ ಸ್ಕ್ಯಾನಿಂಗ್: ಈ ಐಪಿಎಲ್ ಆವೃತ್ತಿಯಿಂದ ಹೊರಕ್ಕೆ