ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯ ಉಳಿದ ಪಂದ್ಯಗಳು ಇದೇ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಕೆಲ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರರು ಇಂದು ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಇನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಳೆ (ಶುಕ್ರವಾರ) ತನ್ನ ಕ್ವಾರಂಟೈನ್ ಅವಧಿಯನ್ನು ಮುಗಿಸಲಿದ್ದು, ಅದು ಸಹ ಶೇಖ್ ಜಾಯೇದ್ ಮೈದಾನದಲ್ಲಿ ಬೆವರು ಹರಿಸಲಿದೆ.

ಪ್ರಸ್ತುತ ಮಾಹಿತಿ ಪ್ರಕಾರ ಅಲ್ಲಿ (ದುಬೈ) 6 ದಿನಗಳ ಕಡ್ಡಾಯ ಕ್ವಾರಂಟೈನ್ ಹೇರಲಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಕ್ವಾರಂಟೈನ್ ಅವಧಿ ಇಂದು ಮುಗಿದಿದ್ದರಿಂದ ಇಂದಿನಿಂದ (ರಾತ್ರಿ- ಭಾರತೀಯ ಕಾಲಮಾನ ಪ್ರಕಾರ) ಅಭ್ಯಾಸ ಸಹ ಪ್ರಾರಂಭ ಮಾಡಲಿದೆ. ಮಗದೊಂದು ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ನಾಯಕತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ನಾಳೆ ಮೈದಾನಕ್ಕೆ ಇಳಿಯಲಿದೆ.
ಕಳೆದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದ ದೆಹಲಿ ಕ್ಯಾಪಿಟಲ್ಸ್ (ಡಿಸಿ) ತಂಡ ಶನಿವಾರ ದುಬೈಗೆ ತೆರಳಿಲಿದೆ. ಇನ್ನು ತಂಡದ ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಯುಎಇಯಲ್ಲಿದ್ದು ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಂಡ ಶನಿವಾರ ಮುಂಜಾನೆ ಇಲ್ಲಿಂದ ಹೊರಡಲಿದೆ. ದೇಶೀಯ ಆಟಗಾರರು ಅಧಿಕಾರಿಗಳೊಂದಿಗೆ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಯುಎಇ ನಿಯಮಾವಳಿ ಪ್ರಕಾರ ಒಂದು ವಾರಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಶ್ರೇಯಸ್ ಅಯ್ಯರ್ ಈಗಾಗಲೇ ಯುಎಇಯಲ್ಲಿ ಅಭ್ಯಾಸ ನಡೆಸಿದ್ದಾರೆ. ಇನ್ನು ಭಾರತ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನ ಉಳಿದ ಆಟಗಾರರು ಶೀಘ್ರದಲ್ಲೇ ಸೇರಿಕೊಳ್ಳಲಿದ್ದಾರೆ ಎಂದು ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
COVID-19 ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ 4ನೇ ಆವೃತ್ತಿಯು ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕಾಳಗದೊಂದಿದೆ ಮತ್ತೆ ಪ್ರಾರಂಭವಾಗಲಿವೆ.