ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿತು. ನಿನ್ನೆ(ಭಾನುವಾರ ರಾತ್ರಿ) ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇಬ್ಬರು ದೈತ್ಯ ಬ್ಯಾಟರ್‌ಗಳು ಮುಂಬೈ ವಿರುದ್ಧ ಜೊತೆಯಾಟದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪ್ರಸ್ತುತ ಐಪಿಎಲ್ ಅಭಿಯಾನವನ್ನು ಗೆಲುವಿನ ಮೂಲಕ ಪ್ರಾರಂಭಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಮುಂದಿನ ಪಂದ್ಯಗಳಿಗೆ ವಿಶ್ವಾಸ ಹೆಚ್ಚಿಸಿಕೊಂಡಿತು.
ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಮುಂಬೈ ವಿಕೆಟ್ಗಳ ಕುಸಿತದ ನಡುವೆಯೂ ಭರ್ಜರಿ ಬ್ಯಾಟಿಂಗ್ ಮಾಡಿತು. ಯುವ ಆಟಗಾರ ತಿಲಕ್ ವರ್ಮಾ ಅವರ ಉತ್ತಮ ಪ್ರದರ್ಶನದಿಂದ ಮುಂಬೈ ತಂಡ ಆರ್ಸಿಬಿಗೆ 172 ರನ್‌ಗಳ ಗುರಿ ನೀಡಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಅವರ ಅದ್ಭುತ ಇನ್ನಿಂಗ್ಸ್‌ನ ಫಲವಾಗಿ RCB ಸುಲಭವಾಗಿ ಮುಂಬೈ ನೀಡಿದ ಗುರಿ ತಲುಪಿತು. ಕೊಹ್ಲಿ, ಡುಪ್ಲೆಸಿಸ್ ಮುಂಬೈ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ರೂವಾರಿಗಳಾದರು.
ಕೊಹ್ಲಿ ಹಾಗು ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 148 ರನ್ ಜೊತೆಯಾಟ ಒದಗಿಸಿದರು. ಈ ಜೊತೆಯಾಟವನ್ನು ಅರ್ಷದ್ ಖಾನ್ 15ನೇ ಓವರ್‌ನಲ್ಲಿ ಡುಪ್ಲೆಸಿಸ್ ಔಟ್ ಮಾಡುವ ಮೂಲಕ ಮುರಿದರು. ಡುಪ್ಲೆಸಿಸ್ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 73 ರನ್ ಸಂಪಾದಿಸಿದರು. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದರು. ಕೊಹ್ಲಿ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದವು. ಕೊಹ್ಲಿ ಸಿಕ್ಸರ್ ಬಾರಿಸುವ ಮೂಲಕ ಆರ್ಸಿಬಿಗೆ ಜಯ ತಂದಿಟ್ಟರು.
ಕೊಹ್ಲಿ-ಡುಪ್ಲೆಸಿಸ್ ದಾಖಲೆ ಏನು?: ಮುಂಬೈ ವಿರುದ್ಧ ಅಮೋಘ ಜೊತೆಯಾಟ ಆಡುವ ಮೂಲಕ ಕೊಹ್ಲಿ ಹಾಗೂ ಡುಪ್ಲೆಸಿಸ್ ದಾಖಲೆಯನ್ನೂ ಬರೆದರು. ಇಬ್ಬರೂ ಮುಂಬೈ ವಿರುದ್ಧ ನಾಲ್ಕನೇ ದೊಡ್ಡ ಆರಂಭಿಕ ಜೊತೆಯಾಟ ನೀಡಿದ್ದಾರೆ. ಮುಂಬೈ ಎದುರು ಅತಿ ಹೆಚ್ಚು ಆರಂಭಿಕ ಜೊತೆಯಾಟದ ದಾಖಲೆ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ವಿವಿಎಸ್ ಲಕ್ಷ್ಮಣ್ ಜೋಡಿಯ ಹೆಸರಲ್ಲಿದೆ. 2008ರಲ್ಲಿ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಗಿಲ್‌ಕ್ರಿಸ್ಟ್ ಮತ್ತು ಲಕ್ಷ್ಮಣ್ ಮೊದಲ ವಿಕೆಟ್‌ಗೆ 155 ರನ್ ಪೇರಿಸಿದ್ದರು. ಆಗ ಈ ಆಟಗಾರರು ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದರು.
ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಜೋಡಿ ಎರಡನೇ ಸ್ಥಾನದಲ್ಲಿದೆ. 2020 ರಲ್ಲಿ ಶಾರ್ಜಾ ಮೈದಾನದಲ್ಲಿ ಮುಂಬೈಯೆದುರು ಇವರು 151 ರನ್ ಜೊತೆಯಾಟ ಆಡಿದ್ದರು. 2013ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ 151 ರನ್ ಗಳಿಸಿದ್ದ ಮಹೇಲಾ ಜಯವರ್ಧನೆ ಮತ್ತು ವೀರೇಂದ್ರ ಸೆಹ್ವಾಗ್ ಈ ದಾಖಲೆ ಬರೆದ ಮೂರನೇ ಜೋಡಿಯಾಗಿದೆ. ಇಬ್ಬರೂ ದೆಹಲಿ ತಂಡದಲ್ಲಿದ್ದರು.
ಇದನ್ನೂ ಓದಿ: TATA IPL 2023: ವಿರಾಟ್, ಡು ಪ್ಲೆಸಿಸ್ ಅರ್ಧಶತಕ.. ಪ್ರಥಮ ಪಂದ್ಯದಲ್ಲಿ ಆರ್ಸಿಬಿಗೆ ಜಯ