ಅಹಮದಾಬಾದ್(ಗುಜರಾತ್): ಮೇ. 29ರಂದು ಗುಜರಾತ್ನ ಅಹಮದಾಬಾದ್ನಲ್ಲಿರುವ ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಫೈನಲ್ ಪಂದ್ಯಕ್ಕಾಗಿ ಕ್ರೀಡಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸುಮಾರು ಮೂರು ವರ್ಷಗಳ ಬಳಿಕ ಐಪಿಎಲ್ ಸಮಾರೋಪ ಸಮಾರಂಭ ನಡೆಯುತ್ತಿರುವ ಫೈನಲ್ ಪಂದ್ಯಕ್ಕಾಗಿ ಅದ್ಧೂರಿ ಯೋಜನೆ ಹಾಕಿಕೊಳ್ಳಲಾಗಿದೆ.
ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಈಗಾಗಲೇ ಗುಜರಾತ್ ಟೈಟನ್ಸ್ ಫೈನಲ್ಗೆ ಲಗ್ಗೆ ಹಾಕಿದ್ದು, ಎದುರಾಳಿ ಸ್ಥಾನಕ್ಕಾಗಿ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ. ಇದರ ಬೆನ್ನಲ್ಲೇ ಫೈನಲ್ಗೋಸ್ಕರ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಇದರ ಮಧ್ಯೆ ಮೈದಾನದ ಹೊರಗೆ ಗುಜರಾತ್ ಟೈಟನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಮಾರಾಟ ಕೂಡ ಜೋರಾಗಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮಿಷ್ಟದ ಜೆರ್ಸಿ ಖರೀದಿ ಮಾಡ್ತಿದ್ದಾರೆ. ಇನ್ನು ಫೈನಲ್ ಪಂದ್ಯ ನೋಡಲು ಆನ್ಲೈನ್ ಹಾಗೂ ಕ್ರೀಡಾಂಗಣದ ಕೌಂಟರ್ನಲ್ಲಿ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಫೈನಲ್ ಪಂದ್ಯದ ಸಮಾರೋಪ ಸಮಾರಂಭ ರಾತ್ರಿ 6:30ಕ್ಕೆ ಆರಂಭಗೊಳ್ಳಲಿದ್ದು, ಸುಮಾರು 50 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಟಾಸ್ 7:30ಕ್ಕೆ ನಡೆಯಲಿದ್ದು, ಪಂದ್ಯ 8 ಗಂಟೆಗೆ ಆರಂಭವಾಗಲಿದೆ.
ಇದನ್ನೂ ಓದಿ: ಸಹಾ Vs ಕಾರ್ತಿಕ್: ಒಬ್ಬರ ಆಯ್ಕೆ ಇನ್ನೊಬ್ಬರ ಕಡೆಗಣನೆ ಬಗ್ಗೆ 'ಈಟಿವಿ ಭಾರತ್' ಜೊತೆ ಮಾಜಿ ಆಟಗಾರರ ಮಾತು
1.32 ಲಕ್ಷ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಶೇ. 100ರಷ್ಟು ಅನುಮತಿ ನೀಡಿರುವ ಕಾರಣ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ. ಮೇ. 29ರಂದು ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ 50 ನಿಮಿಷಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿವೆ. ಇದರಲ್ಲಿ ವಿವಿಧ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ಗಾಯಕ ಎ ಆರ್ ರೆಹಮಾನ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.
ಪಂದ್ಯ ವೀಕ್ಷಣೆ ಮಾಡಲು ವಿವಿಧ ರಾಜಕಾರಣಿಗಳು ಆಗಮಿಸುವ ಸಾಧ್ಯತೆ ದಟ್ಟವಾಗಿದ್ದು, ಇದಕ್ಕಾಗಿ ಗುಜರಾತ್ ಕ್ರಿಕೆಟ್ ಅಸೋಷಿಯೇಷನ್ ಹಾಗೂ ಬಿಸಿಸಿಐ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ಕೂಡ ರಿಲೀಸ್ ಆಗಲಿದೆ.