ಅಹಮದಾಬಾದ್: ನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ, ಗಿಲ್ (45), ಮಿಲ್ಲರ್ (32) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಎದುರಾಳಿ ರಾಜಸ್ಥಾನ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಗುಜರಾತ್ ಟೈಟನ್ಸ್ ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗದ ವಿರುದ್ಧ ಗೆಲುವಿನ ಕಹಳೆ ಮೊಳಗಿಸಿತು. ಈ ಮೂಲಕ ಐಪಿಎಲ್ನಲ್ಲಿ ಮತ್ತೊಂದು ಹೊಸ ಚಾಂಪಿಯನ್ ತಂಡ ಉದಯಿಸಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಎದುರಾಳಿ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಗುಜರಾತ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಸಂಜು ಬಳಗ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಮಾತ್ರ ಗಳಿಸಲು ಶಕ್ತವಾಯಿತು. ಕ್ವಾಲಿಫೈಯರ್ 2ರಲ್ಲಿ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಬಟ್ಲರ್ ಕೇವಲ 39 ರನ್ ಬಾರಿಸಿದರು. ಉಳಿದಂತೆ ಜೈಸ್ವಾಲ್ (22),ಸ್ಯಾಮ್ಸನ್ (14), ಪಡಿಕ್ಕಲ್ (2) ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲೂ ಹೆಟ್ಮಾಯರ್ (11), ಅಶ್ವಿನ್ (6), ಪರಾಗ್ (15) ರನ್ ಗಳಿಸಿ, ಎದುರಾಳಿ ತಂಡದ ಮಾರಕ ಬೌಲಿಂಗ್ ಶಕ್ತಿಗೆ ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಪೇರಿಸಿತು. ಗುಜರಾತ್ ತಂಡದ ಪರ ಮಿಂಚಿದ ನಾಯಕ ಹಾರ್ದಿಕ್ 3 ವಿಕೆಟ್, ಸಾಯಿ ಕಿಶೋರ್ 2, ಶಮಿ, ದಯಾಳ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
131 ರನ್ ಗುರಿ ಬೆನ್ನತ್ತಿದ ಗುಜರಾತ್ ತಂಡ ಆರಂಭಿಕ ಆಘಾತದ ಹೊರತಾಗಿ ಶುಬ್ಮನ್ ಗಿಲ್ (45), ನಾಯಕ ಹಾರ್ದಿಕ್ ಪಾಂಡ್ಯ (34) ಹಾಗೂ ಮಿಲ್ಲರ್ (32) ರನ್ಗಳ ನೆರವಿನಿಂದ 18.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಜೊತೆಗೆ ಚೊಚ್ಚಲ ಐಪಿಎಲ್ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಆಲ್ರೌಂಡರ್ ಆಟ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಚೊಚ್ಚಲ ಐಪಿಎಲ್ನಲ್ಲೇ ಇತಿಹಾಸ: 2022ರ ಐಪಿಎಲ್ನಲ್ಲಿ ಹೊಸ ತಂಡವಾಗಿ ಪದಾರ್ಪಣೆ ಮಾಡಿದ್ದ ಗುಜರಾತ್ ಟೈಟನ್ಸ್ ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ಪಟ್ಟಕೇರಿದೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. 2008ರಲ್ಲಿ ಆರಂಭಗೊಂಡ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪ್ರಶಸ್ತಿ ಗೆದ್ದಿತು. ಇದಾದ ಬಳಿಕ ಫೈನಲ್ಗೆ ಲಗ್ಗೆ ಹಾಕಿದ್ದ ತಂಡ ಸೋತು ರನ್ನರ್ ಆಗಿ ಹೊರಹೊಮ್ಮಿದೆ. ಈ ಪಂದ್ಯದೊಂದಿಗೆ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ 2022ರ ಐಪಿಎಲ್ಗೆ ತೆರೆ ಬಿದ್ದಿದೆ. ಇನ್ನೂ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಗುಜರಾತ್-ರಾಜಸ್ಥಾನ ಒಟ್ಟು ಮೂರು ಸಲ ಮುಖಾಮುಖಿಯಾಗಿದ್ದು(ಫೈನಲ್ ಸೇರಿ) ಎಲ್ಲ ಪಂದ್ಯಗಳಲ್ಲಿ ಹಾರ್ದಿಕ್ ಬಳಗ ಗೆದ್ದು ಪಾರಮ್ಯ ಮೆರೆದಿದೆ.