ಮುಂಬೈ: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇ - ಆಫ್ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಹೊಸ ನಿಯಮ ಜಾರಿಗೊಳಿಸಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ಧುಗೊಂಡರೆ, ಸೂಪರ್ ಓವರ್ ಮೂಲಕ ವಿಜೇತ ತಂಡ ಘೋಷಣೆ ಮಾಡಲು ನಿರ್ಧರಿಸಿದೆ. ಅದು ಸಾಧ್ಯವಾಗದೇ ಹೋದರೆ, ಲೀಗ್ ಹಂತದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿರುವ ತಂಡವನ್ನ ವಿಜೇತ ಎಂದು ಘೋಷಿಸುವ ನಿರ್ಧಾರ ಕೈಗೊಂಡಿದೆ.
ಐಪಿಎಲ್ನ ಲೀಗ್ ಪಂದ್ಯಗಳು ಮುಕ್ತಾಯಗೊಂಡ ಬೆನ್ನಲ್ಲೇ ಬಿಸಿಸಿಐ ಪ್ಲೇ - ಆಫ್, ಫೈನಲ್ ಪಂದ್ಯಕ್ಕಾಗಿ ಹೊಸ ನಿಯಮ ಘೋಷಣೆ ಮಾಡಿದೆ. ಈ ನಿಯಮದ ಪ್ರಕಾರ ಮಳೆಯಿಂದ ಅಥವಾ ಇತರ ಕಾರಣಗಳಿಂದ ನಿಗದಿತ ಸಮಯದಲ್ಲಿ ಪಂದ್ಯ ಆಡಿಸಲು ಸಾಧ್ಯವಾಗದೇ ಹೋದರೆ, ಸೂಪರ್ ಓವರ್ ಮೂಲಕ ವಿಜೇತ ತಂಡ ಘೋಷಣೆ ಮಾಡಲಿದೆ. ಇದು ಕೂಡ ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಂಡವನ್ನ ವಿಜಯಶಾಲಿ ತಂಡ ಎಂದು ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಉದಾಹರಣೆಗೆ ನಾಳೆ ಗುಜರಾತ್-ರಾಜಸ್ಥಾನ ತಂಡ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಸಂದರ್ಭದಲ್ಲಿ ಮಳೆಯಿಂದ ಪಂದ್ಯ ರದ್ಧುಗೊಂಡರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ವಿಜೇತ ತಂಡ ಎಂದು ಘೋಷಣೆ ಮಾಡಲಾಗುತ್ತದೆ. ಲಖನೌ ಹಾಗೂ ಬೆಂಗಳೂರು ನಡುವಿನ ಪಂದ್ಯಕ್ಕೂ ಈ ನಿಯಮ ಅನ್ವಯವಾಗಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಆಯೋಜನೆಗೊಂಡಿವೆ. ಆದರೆ, ಕಳೆದ ಕೆಲ ದಿನಗಳಿಂದ ಇಲ್ಲಿ ಮಳೆ ಸುರಿಯುತ್ತಿರುವ ಕಾರಣ ಆಟಕ್ಕೆ ಅಡಚಣೆಯಾಗುವುದನ್ನ ಅಲ್ಲಗಳೆಯುವಂತಿಲ್ಲ. ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರದ ಕಾರಣ, ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿವೆ. ಒಂದು ವೇಳೆ ಮಳೆಯಿಂದ ತಡವಾದರೆ, ರಾತ್ರಿ 9:40ಕ್ಕೆ ಪಂದ್ಯ ನಡೆಯಲಿವೆ. ಆದರೆ, ಒಂದೇ ಒಂದು ಎಸೆತ ಎಸೆಯಲು ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಂಡ ವಿಜೇತ ಎಂದು ಘೋಷಣೆ ಮಾಡಲಾಗುತ್ತದೆ.
ಆರ್ಸಿಬಿಗೆ ಕಂಟಕ: ಐಪಿಎಲ್ನಲ್ಲಿ 4ನೇ ತಂಡವಾಗಿ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಂಡಿರುವ ಆರ್ಸಿಬಿ ತಂಡಕ್ಕೆ ಬಿಸಿಸಿಐ ನಿರ್ಧಾರ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಒಂದು ವೇಳೆ ಹವಾಮಾನ ವೈಪರೀತ್ಯದಿಂದ ಲಖನೌ - ಬೆಂಗಳೂರು ತಂಡಗಳು ನಡುವಿನ ಪಂದ್ಯ ಸಾಧ್ಯವಾಗದಿದ್ದರೆ, ಅಥವಾ ಸೂಪರ್ ಓವರ್ ನಡೆಯದಿದ್ದರೆ, ರಾಹುಲ್ ನೇತೃತ್ವದ ಲಖನೌ ವಿಜೇತ ತಂಡ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಆರ್ಸಿಬಿ ಯಾವುದೇ ಪಂದ್ಯ ಆಡದೇ ಹೊರಬೀಳುವ ಸಾಧ್ಯತೆ ದಟ್ಟವಾಗಿರುತ್ತದೆ.