ಮುಂಬೈ: ಐಪಿಎಲ್-2021ರ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿಯವರೆಗೆ ಚೆನ್ನೈನಲ್ಲಿ ಆಡಿದ್ದ ಆರ್ಸಿಬಿ ಇಂದಿನ ಪಂದ್ಯವನ್ನು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಲಿದೆ. ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಆರಂಭಿಕ ಹಾಗೂ ಅಗ್ರ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗಿಳಿಯುವ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ಸ್ಪಿನ್ನರ್ ಚಹಲ್ ಕೈಚಳಕ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸಿರಾಜ್ ಕರಾರುವಾಕ್ ದಾಳಿ ನಡೆಸಿದ್ದರೆ, ಹರ್ಷಲ್ ಪಟೇಲ್ ಅವರ ಉತ್ತಮ ಪ್ರದರ್ಶನ ತಂಡಕ್ಕೆ ಹೆಚ್ಚಿನ ಬಲ ತುಂಬಿದೆ.
ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಸಮತೋಲನದ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು, ಒಂದು ಬಾರಿ ಜಯ ಕಂಡಿದೆ. ಪಂಜಾಬ್ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಅಬ್ಬರದ ಶತಕದ ನಡುವೆಯೂ ಸೋಲುಂಡಿದ್ದ ರಾಯಲ್ಸ್ ಎರಡನೇ ಪಂದ್ಯದಲ್ಲಿ ಮಿಲ್ಲರ್ ಹಾಗೂ ಮೋರಿಸ್ ಅಬ್ಬರದ ಬ್ಯಾಟಿಂಗ್ನಿಂದ 3 ವಿಕೆಟ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ನ್ನು ಮಣಿಸಿತ್ತು. ಆದರೆ ಸಿಎಸ್ಕೆ ಜೊತೆಗಿನ ಮೂರನೇ ಪಂದ್ಯದಲ್ಲಿ ಮತ್ತೆ ಮುಗ್ಗರಿಸಿದೆ.
ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಆರ್ಸಿಬಿ 2ನೇ ಸ್ಥಾನದಲ್ಲಿದ್ದರೆ, ಆರ್ಆರ್ 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲೂ ಜಯ ಸಾಧಿಸಿದರೆ ಕೊಹ್ಲಿ ಟೀಂ ಮತ್ತೆ ಅಗ್ರಪಟ್ಟಕ್ಕೇರಲಿದೆ. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ.
ಸಂಭವನೀಯ 11ರ ಬಳಗ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕೈಲ್ ಜೆಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ & ವಿ.ಕೀ), ಶಿವಂ ದುಬೆ, ಡೆವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್/ಜಯದೇವ್ ಉನದ್ಕತ್, ಚೇತನ್ ಸಕಾರಿಯ, ಮುಸ್ತಾಫಿಜರ್ ರಹಮಾನ್
ಇದನ್ನೂ ಓದಿ: ನಲಪಾಡ್ ವಿರುದ್ಧ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಿಂದ ಪೊಲೀಸರಿಗೆ ದೂರು