ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪಾಯಿಂಟ್ ಪಟ್ಟಿಯ ಕೊನೆಯ ಎರಡು ಸ್ಥಾನಗಳಲ್ಲಿವೆ. ಇಂದು ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆಲುವಿಗಾಗಿ ಹಪಹಪಿಸುತ್ತಿವೆ.
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿರುವ ಹೈದರಾಬಾದ್ ತಂಡ ಆ ಜವಾಬ್ದಾರಿಯನ್ನು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ಗೆ ವಹಿಸಿದೆ. ಹೀಗಾಗಿ ಅವರಿಗೆ ಇಂದಿನ ಪಂದ್ಯ ಸತ್ವಪರೀಕ್ಷೆಯಾಗಲಿದೆ. ಇತ್ತ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವೊಂದೇ ಮೂಲ ಮಂತ್ರವಾಗಿದ್ದು, ವಿಲಿಯಮ್ಸನ್ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯಲು ಸಜ್ಜಾಗಿದೆ.
ರಾಜಸ್ಥಾನ ರಾಯಲ್ಸ್ ಆಡಿದ ಆರು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಕಂಡಿದೆ. 4ರಲ್ಲಿ ಸೋಲುಂಡಿದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿದ್ದ ರಾಯಲ್ಸ್, ನಂತರ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ಗಳಿಸಿತ್ತು. ಹೈದರಾಬಾದ್ ತಂಡ ಕೂಡಾ ಆಡಿದ ಆರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವಿನ ನಗೆ ಬೀರಿದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಹೈದರಾಬಾದ್‌ಗೆ ಗೆಲುವು ಅನಿವಾರ್ಯ.
ಬೆನ್ ಸ್ಟೋಕ್ಸ್ ಮತ್ತು ಜೊಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ಆರ್ಆರ್ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ತಂಡದ ಬ್ಯಾಟಿಂಗ್ ವಿಭಾಗ ಪೂರ್ಣವಾಗಿ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ ಮೇಲೆ ಅವಲಂಬಿತವಾಗಿದೆ. ಆದರೆ ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ 119 ರನ್ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಒಂದು ಅರ್ಧಶತಕ ಮಾತ್ರ ಗಳಿಸಿದ್ದು ರಿಯಾನ್ ಪರಾಗ್ ಅವರ ಇಲ್ಲಿವರೆಗಿನ ಗರಿಷ್ಠ ಮೊತ್ತ 25 ರನ್. ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ಮೊರಿಸ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆರು ಪಂದ್ಯಗಳಲ್ಲಿ ಅವರು 11 ವಿಕೆಟ್ ಗಳಿಸಿದ್ದಾರೆ. ಆರಂಭದಲ್ಲಿ ಮಿಂಚಿದ್ದ ಚೇತನ್ ಸಕಾರಿಯ ನಂತರದ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಹೈದರಾಬಾದ್ ತಂಡ ಉತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಆದರೆ ಇವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಜಾನಿ ಬೈಸ್ಟೋ, ಡೇವಿಡ್ ವಾರ್ನರ್ ಉತ್ತಮ ಓಪನಿಂಗ್ ನೀಡುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ ಸಾಥ್ ನೀಡುತ್ತಿದ್ದಾರೆ. ಆದರೆ ಅಂತಿಮ ಓವರ್ಗಳಲ್ಲಿ ಯಾವೊಬ್ಬ ಆಟಗಾರ ಕೂಡಾ ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿಲ್ಲ. ಇದೇ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ.
ಇದನ್ನೂ ಓದಿ: ಐಪಿಎಲ್ 2021: ಮುಂಬೈಗೆ 4 ವಿಕೆಟ್ಗಳ ಅದ್ಭುತ ಗೆಲುವು
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರಶೀದ್ ಖಾನ್ ತಂಡಕ್ಕೆ ಬಲ ತುಂಬಿದ್ದಾರೆ. ಆದರೆ ಉಳಿದವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ:
ಸಂಜು ಸ್ಯಾಮ್ಸನ್ (ವಿ.ಕೀ. ಮತ್ತು ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಜಯದೇವ ಉನಾದ್ಕತ್, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜುರ್ ರಹಮಾನ್ ಹಾಗು ಚೇತನ್ ಸಕಾರಿಯ.
ಸನ್ ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಜಾನಿ ಬೇಸ್ಟೋ (ವಿ.ಕೀ.), ಮನೀಷ್ ಪಾಂಡೆ, ವಿಜಯಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹಮ್ಮದ್, ಸಿದ್ಧಾರ್ಥ್ ಕೌಲ್, ಜೆ.ಸುಚಿತ್, ಕೇದಾರ್ ಜಾಧವ್.
ಪಂದ್ಯ ಸಮಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್