ಅಬುದಾಭಿ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಬೃಹತ್ ಮೊತ್ತ ದಾಖಲಿಸಿ ಜಯ ಸಾಧಿಸಿದರೂ ಕೂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ.
ರೋಹಿತ್ ಶರ್ಮಾ ಪಡೆ ಪ್ಲೇ ಆಫ್ ಹಂತ ತಲುಪಲು ಈ ಪಂದ್ಯದಲ್ಲಿ 170+ ರನ್ಗಳ ಅಂತರದ ಗೆಲುವು ಸಾಧಿಸಬೇಕಿತ್ತು. ಆದ್ರೆ 42 ರನ್ಗಳ ಅಂತರದಿಂದ ಮಾತ್ರ ಜಯ ಸಾಧಿಸಿದ್ದರಿಂದ ಟೂರ್ನಿಯಿಂದ ಮುಂಬೈ ಹೊರಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಮುಂಬೈ ನಿಗದಿತ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 235ರನ್ಗಳಿಕೆ ಮಾಡಿತ್ತು.
ಆರಂಭದಿಂದಲೇ ರೋಹಿತ್ ಪಡೆ ಸ್ಫೋಟಕ ಬ್ಯಾಟಿಂಗ್ಗೆ ಇಳಿಯಿತು. 18ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಆದರೆ ಮತ್ತೋರ್ವ ಆರಂಭಿಕ ಕಿಶನ್ ಕೇವಲ 16 ಎಸೆತಗಳಲ್ಲಿ 50ರನ್ ಸಿಡಿಸಿ ಮಿಂಚಿದರು. ಕಿಶನ್ ಜೊತೆ ಸೇರಿದ ಹಾರ್ದಿಕ್ ಪಾಂಡ್ಯ 10ರನ್ ಹಾಗೂ ಪೊಲಾರ್ಡ್ 13ರನ್ ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
ಕಿಶನ್-ಸೂರ್ಯ ಆರ್ಭಟ
ಬೃಹತ್ ರನ್ ಗಳಿಕೆ ಮಾಡಬೇಕಾದ ಅನಿವಾರ್ಯತೆ ಕಾರಣ ಮುಂಬೈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದತ್ತ ಹೆಚ್ಚಿನ ಗಮನ ನೀಡಿತು. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ ಕೂಡ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದರು. ಕೇವಲ 40 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ನಿಂದ 82ರನ್ಗಳಿಕೆ ಮಾಡಿದರು. ಕಿಶನ್ ಕೂಡ 32 ಎಸೆತಗಳಲ್ಲಿ 4 ಸಿಕ್ಸರ್, 11 ಬೌಂಡರಿ ಸೇರಿ 84ರನ್ಗಳಿಸಿದರು.
ಇದಾದ ಬಳಿಕ ಬಂದ ಕೃನಾಲ್ 9ರನ್, ಕೌಂಟರ್ ನೇಲ್ 3, ಬುಮ್ರಾ 5ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 235ರನ್ಗಳಿಕೆ ಮಾಡಿದ್ದು, ಇದೀಗ ಪ್ಲೇ-ಆಫ್ಗೆ ಲಗ್ಗೆ ಹಾಕಬೇಕಾದರೆ ರೋಹಿತ್ ಪಡೆ ಎದುರಾಳಿ ತಂಡವನ್ನ 65ರನ್ಗಳೊಳಗೆ ಕಟ್ಟಿಹಾಕಬೇಕಾಗಿದೆ.
ಹೈದರಾಬಾದ್ ಪರ ಹೊಲ್ಡರ್ 4 ವಿಕೆಟ್, ರಾಶಿದ್ ಖಾನ್, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದುಕೊಂಡರೆ, ಉಮ್ರಾನ್ ಮಲಿಕ್ 1 ವಿಕೆಟ್ ಕಿತ್ತರು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರಂಭಿಕರಾಗಿ ಆಗಮಿಸಿದ ಜಾಸನ್ ರಾಯ್ (34), ಅಭಿಶೇಕ್ ಶರ್ಮಾ (33) ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಕ್ಯಾಪ್ಟನ್ ಮನೀಶ್ ಪಾಂಡೆ ಅಜೇಯ 69 ಸಿಡಿಸಿದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ತಂಡ ದಿಢೀರ್ ಕುಸಿತ ಕಂಡಿತು. ಪ್ರಿಯಂ ಗರ್ಗ್ 29 ರನ್ ಹೊರತುಪಡಿಸಿ ಉಳಿದ ಐವರು ಎರಡಂಕಿಗೆ ವಿಕೆಟ್ ಒಪ್ಪಿಸಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 193 ರನ್ ಗಳಿಸಿ ಸೋಲನುಭವಿಸಿತು. ಜೊತೆಗೆ ಪ್ರಸಕ್ತ ಟೂರ್ನಿಯಿಂದಲೂ ಹೊರಬಿದ್ದಿದೆ.