ದುಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2021) ಫೈನಲ್ ಪಂದ್ಯದಲ್ಲಿ ಇಂದು ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ದುಬೈ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಮೇಲುಗೈ ಸಾಧಿಸಿದವರು ಪ್ರಶಸ್ತಿ ಗೆಲ್ಲಲಿದ್ದಾರೆ.
ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಲೀಗ್ನಿಂದ ಹೊರಬಿದ್ದ ಸಿಎಸ್‌ಕೆ ಈ ಬಾರಿ ಪ್ರಥಮ ತಂಡವಾಗಿ ಫೈನಲ್ಗೆ ತಲುಪಿದೆ. ಇತ್ತ ಇಯಾನ್ ಮೋರ್ಗನ್ ನೇತೃತ್ವದ ಕೆಕೆಆರ್ ಕೂಡ ಟೂರ್ನಿಯ 2ನೇ ಹಂತದ ಪಂದ್ಯಗಳಲ್ಲಿ ಭರ್ಜರಿ ಕಮ್ಬ್ಯಾಕ್ ಮೂಲಕ ಫೈನಲ್ಗೇರಿದೆೆ. ಧೋನಿ ಬಳಗವು ಆರಂಭಿಕ ಆಟಗಾರರ ಲಯವನ್ನೇ ನೆಚ್ಚಿಕೊಂಡಿದ್ದರೆ, ಕೆಕೆಆರ್ಗೆ ಆರಂಭಿಕ ಯುವ ಆಟಗಾರರು ಹಾಗೂ ಸ್ಪಿನ್ನರ್ಗಳ ಪರಿಶ್ರಮವು ಈ ಹಂತಕ್ಕೆ ತಂದುನಿಲ್ಲಿಸಿದೆ.
ಬರೋಬ್ಬರಿ 59 ಪಂದ್ಯಗಳ ಜಿದ್ದಾಜಿದ್ದಿನ ಹೋರಾಟದ ನಂತರ ಇಂದು 14ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರೆಂಬುದು ಗೊತ್ತಾಗಲಿದೆ. ಈಗಾಗಲೇ ಸಿಎಸ್‌ಕೆ ಮೂರು ಹಾಗೂ ಕೆಕೆಆರ್ 2 ಬಾರಿ ಟ್ರೋಫಿ ಜಯಿಸಿದ ದಾಖಲೆ ಹೊಂದಿವೆ. ಅದರಲ್ಲಿ ಕೆಕೆಆರ್ ಈ ಹಿಂದೆ ಎರಡು ಸಲ ಅಂತಿಮ ಹಂತ ತಲುಪಿದ್ದಾಗಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಪಿಎಲ್ ಫೈನಲ್ನಲ್ಲಿ ಅಜೇಯವಾಗಿದೆ. ಇನ್ನೊಂದೆಡೆ ಚೆನ್ನೈ ತಂಡ 9ನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ದುಬೈನಲ್ಲಿ ನಡೆದ ಕಳೆದ ಕೆಲ ಪಂದ್ಯಗಳಲ್ಲಿ ಕನಿಷ್ಠ ಸ್ಕೋರ್ ದಾಖಲಾಗಿದೆ. ಮೊದಲು ಬ್ಯಾಟ್ ಮಾಡಿದ ತಂಡ 170-180 ರನ್ ಗಳಿಸಿದರೆ, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಇಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಮಿಂಚಿದ್ದರು. ಹೀಗಾಗಿ ಇಂದೂ ಕೂಡ ಅವರೇ ಆಡುವ ಸಾಧ್ಯತೆ ಇದ್ದು, ರೈನಾ ಹೊರಗುಳಿಯಬಹುದು. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಇದೆ.
ಮೂರನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿರುವ ಕೆಕೆಆರ್ ತಂಡದಲ್ಲಿ ಫಿಟ್ ಆಗಿರುವ ಆಂಡ್ರೆ ರಸೆಲ್ಗೆ ಆಲ್ರೌಂಡರ್ ಶಕಿಬ್ ಅಲ್ ಹಸನ್ ಬದಲಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಔಟ್ ಆಫ್ ಫಾರ್ಮ್ ಆಗಿರುವ ನಾಯಕ ಇಯಾನ್ ಮಾರ್ಗನ್ ವೈಫಲ್ಯತೆ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರಂಭಿಕ ಆಟಗಾರರು ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಫಲವಾಗಿ ಕೆಕೆಆರ್ ಈ ಹಂತಕ್ಕೆ ತಲುಪಿದೆ.
ಸಂಭಾವ್ಯ 11ರ ಬಳಗ:
ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ & ವಿ.ಕೀ), ರವೀಂದ್ರ ಜಡೇಜ, ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹೇಜಲ್‌ವುಡ್
ಕೆಕೆಆರ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ ((ನಾಯಕ ), ದಿನೇಶ್ ಕಾರ್ತಿಕ್ (ವಿ.ಕೀ), ಶಕೀಬ್ ಅಲ್ ಹಸನ್/ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಸಮಯ: ರಾತ್ರಿ 7:30ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ